ಎರಡೂ ತಂಡಗಳ ಫೇವರಿಟ್ ಆಟಗಾರರನ್ನೇ ಫ್ರಾಂಚೈಸಿಗಳು ಬಿಟ್ಟುಕೊಡಲು ಮುಂದಾಗಿದ್ದು, ಇದಕ್ಕಾಗಿ ಎರಡೂ ಫ್ರಾಂಚೈಸಿ ಪ್ರಮುಖ ಆಟಗಾರರನ್ನು ಅದಲು ಬದಲು ಮಾಡಿಕೊಳ್ಳಲು ಮುಂದಾಗಿವೆ.
ರಾಜಸ್ಥಾನ್ ರಾಯಲ್ಸ್ ತಂಡದ ಫೇವರಿಟ್ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆ ಬಿಟ್ಟುಕೊಟ್ಟು ಆ ತಂಡದ ಪ್ರಮುಖ ಆಲ್ ರೌಂಡರ್ ಆಗಿರುವ ರವೀಂದ್ರ ಜಡೇಜಾ ಅವರನ್ನು ಕರೆದುಕೊಳ್ಳುವ ಸಾಧ್ಯತೆ ಇದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಲಾ ಮೂವರು ಆಟಗಾರರನ್ನು ಅದಲು ಬದಲು ಮಾಡಿಕೊಳ್ಳಲು ಮುಂದಾಗಿವೆ ಎಂದು ಹೇಳಲಾಗಿದೆ. ಐಪಿಎಲ್ ನಿಯಮಗಳ ಪ್ರಕಾರ ಹರಾಜಿಗೆ ಮುನ್ನ ಆಟಗಾರರನ್ನು ಬದಲಾಯಿಸಿಕಿಕೊಳ್ಳಲು ಅವಕಾಶವಿದೆ.
ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ 11 ವರ್ಷಗಳಿಂದ ತಮ್ಮ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ಇಬ್ಬರೂ ಆಟಗಾರರು ತಮ್ಮ ನೆಚ್ಚಿನ ತಂಡಗಳನ್ನು ತೊರೆಯಲು ಮುಂದಾಗಿದ್ದಾರೆ. ಇದೇ ವೇಳೆ ಚೆನ್ನೈ ತಂಡದಿಂದ ಸ್ಯಾಮ್ ಕುರಾನ್ ಅವರನ್ನು ಸೆಳೆದುಕೊಳ್ಳಲು ರಾಜಸ್ಥಾನ್ ರಾಯಲ್ಸ್ ಪ್ರಯತ್ನ ನಡೆಸಿದೆ ಎಂದು ಹೇಳಲಾಗಿದೆ.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಹಾಗೂ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2012ರಿಂದ ಪ್ರತಿನಿಧಿಸುತ್ತಿದ್ದಾರೆ. ಎರಡೂ ತಂಡಗಳು ಮ್ಯಾಚ್ ಫಿಕ್ಸಿಂಗ್ ಕಾರಣ 2 ವರ್ಷ (2016-17) ನಿಷೇಧಕ್ಕೆ ಒಳಗಾಗಿದ್ದವು. ಈ ಎರಡೂ ವರ್ಷ ತಂಡವನ್ನು ಇಬ್ಬರೂ ಪ್ರತಿನಿಧಿಸಿರಲಿಲ್ಲ.
ಜಡೇಜಾ 19 ವರ್ಷದ ಹುಡುಗನಿದ್ದಾಗ ಮೊದಲ ಬಾರಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಸಿಎಸ್ ಕೆ ತಂಡದ ಅವಿಭಾಜ್ಯ ಅಂಗವಾಗಿದ್ದು, 254 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2023ರಲ್ಲಿ ತಂಡ ಫೈನಲು ತಲುಪಲು ಪ್ರಮುಖ ಪಾತ್ರ ವಹಿಸಿದ್ದು, ನಾಯಕತ್ವವನ್ನು ಕೂಡ ಪಡೆದಿದ್ದರು. ಆದರೆ ಕೆಲವೇ ಪಂದ್ಯಗಳ ನಂತರ ನಾಯಕತ್ವ ತೊರೆದಿದ್ದರು.
2025ರ ನಂತರ ಸಂಜು ಸ್ಯಾಮ್ಸನ್ ಬದಲಾವಣೆಗಾಗಿ ತಂಡವನ್ನು ತೊರೆಯುವ ಸುಳಿವು ನೀಡಿದ್ದರು. 67 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಸಂಜು ಸ್ಯಾಮ್ಸನ್ 33 ಗೆಲುವು, 33 ಸೋಲು ಕಂಡಿದ್ದಾರೆ. ಕಳೆದ ವರ್ಷ 18 ಕೋಟಿಗೆ ರಾಜಸ್ಥಾನ್ ತಂಡಕ್ಕೆ ಮಾರಾಟವಾಗಿದ್ದರು.


