ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ್ದಕ್ಕೆ 20 ಕೋಟಿ ರೂ. ಬಹುಮಾನ ಮೊತ್ತ ಗಳಿಸಿದೆ.
3 ಬಾರಿ ರನ್ನರ್ ಅಪ್ ಆಗಿದ್ದ ಆರ್ ಸಿಬಿ 18 ವರ್ಷಗಳ ನಂತರ ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. ಈ ಮೂಲಕ 20 ಕೋಟಿ ರೂ. ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿತು.
ಫೈನಲ್ ನಲ್ಲಿ ಆರ್ ಸಿಬಿ ವಿರುದ್ಧ 6 ರನ್ ನಿಂದ ಸೋತು ರನ್ನರ್ ಅಪ್ ಪಂಜಾಬ್ ಕಿಂಗ್ಸ್ 12.5 ಕೋಟಿ ರೂ. ಬಹುಮಾನ ಮೊತ್ತ ಗಳಿಸಿದರೆ, ಕ್ವಾಲಿಫೈಯರ್-2 ಪ್ರವೇಶಿಸಿದ್ದ ಮುಂಬೈ ಇಂಡಿಯನ್ಸ್ ತಂಡ 7 ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನಕ್ಕೆ ಕುಸಿದ ಗುಜರಾತ್ ಟೈಟಾನ್ಸ್ ತಂಡ 6.5 ಕೋಟಿ ರೂ. ಬಹುಮಾನ ಮೊತ್ತ ಗಳಿಸಿತು.
ಐಪಿಎಲ್ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪ್ರಶಸ್ತಿ ವಿಜೇತ ತಂಡಕ್ಕೆ 4.8 ಕೋಟಿ ರೂ. ಬಹುಮಾನ ಮೊತ್ತ ನೀಡಲಾಗಿತ್ತು. ರನ್ನರ್ ಅಪ್ ತಂಡ 2.4 ಕೋಟಿ ರೂ. ಗಳಿಸಿತ್ತು.
ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅತೀ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಆರೆಂಜ್ ಕ್ಯಾಪ್ ಸೇರಿದಂಥೆ 4 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು 40 ಲಕ್ಷ ರೂ. ಬಹುಮಾನ ಮೊತ್ತಕ್ಕೆ ಪಾತ್ರರಾದರು.
ಅತೀ ಹೆಚ್ಚು ವಿಕೆಟ್ ಪಡೆದ ಕರ್ನಾಟಕದ ಪ್ರಸಿದ್ಧ ಕೃಷ್ಣ ಪರ್ಪಲ್ ಕ್ಯಾಪ್ ಗೌರವದೊಂದಿಗೆ 10 ಲಕ್ಷ ರೂ. ಬಹುಮಾನ ಗಳಿಸಿದರೆ, ಉತ್ತಮ ಪಿಚ್ ಮತ್ತು ಮೈದಾನಕ್ಕಾಗಿ ಡೆಲ್ಲಿಗೆ 50 ಲಕ್ಷ ರೂ. ಬಹುಮಾನ ಲಭಿಸಿತು.
ಮೌಲ್ಯಯುತ ಅಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವರ (10 ಲಕ್ಷ ರೂ.), ಸೂಪರ್ ಸ್ಟ್ರೈಕ್ ರೇಟರ್ ಆಗಿ ರಾಜಸ್ಥಾನ್ ರಾಯಲ್ಸ್ ತಂಡದ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ (10 ಲಕ್ಷ ರೂ.), ಶ್ರೇಷ್ಠ ಕ್ಯಾಚ್ ಹಿಡಿದಿದ್ದಕ್ಕಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಕಮಿಂಡು ಮೆಂಡಿಸ್ (10 ಲಕ್ಷ ರೂ.), ಅತೀ ಹೆಚ್ಚು ಡಾಟ್ ಬಾಲ್ ಹಾಕಿದ್ದಕ್ಕಾಗಿ ಮೊಹಮದ್ ಸಿರಾಜ್ (10 ಲಕ್ಷ ರೂ.) ಪಾತ್ರಾದರು.


