ಭಾರತ ತಂಡದ ನಾಯಕ ಶುಕ್ರವಾರ ಆರಂಭಗೊಳ್ಳಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ತಂಡದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಅಗ್ರ ಕ್ರಮಾಂಕ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.
ಅಡಿಲೇಡ್ ನಲ್ಲಿ ಡಿಸೆಂಬರ್ 6ರಿಂದ ನಡೆಯಲಿರುವ ಪಿಂಕ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದನ್ನು ದೃಢಪಡಿಸಿದ್ದಾರೆ.
ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಪ್ರಮುಖ ಕಾರಣವಾಗಿದ್ದೇ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್. ಇವರಿಬ್ಬರ ಜೊತೆಯಾಟದಿಂದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಮೇಲುಗೈ ಸಾಧಿಸಿದ್ದೂ ಅಲ್ಲದೇ 295 ರನ್ ಗಳ ಭಾರೀ ಅಂತರದಿಂದ ಗೆದ್ದು ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿತ್ತು.
ವೈಯಕ್ತಿಕ ಕಾರಣದಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮ, ಅಭ್ಯಾಸ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಪ್ರಯೋಗ ನಡೆಸಿ ವಿಫಲರಾಗಿದ್ದರು. ಆದರೂ ಅವರು ತಮ್ಮ ನೆಚ್ಚಿನ ಅಗ್ರ ಕ್ರಮಾಂಕದಲ್ಲಿ ಆಡದೇ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮ, ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಯಾವುದಾದರೂ ಸ್ಥಾನದಲ್ಲಿ ಆಡುವೆ. ಇದು ನನ್ನ ಪಾಲಿಗೆ ತುಂಬಾ ಕಷ್ಟ. ಆದರೆ ತಂಡದ ಹಿತಾಸಕ್ತಿ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಹೇಳಿದರು.