ಆರಂಭಿಕ ವೈಭವ್ ಸೂರ್ಯವಂಶಿ ಅರ್ಧಶತಕ ಹಾಗೂ ಬೌಲರ್ ಗಳ ಸಹಾಯದಿಂದ ಭಾರತ ತಂಡ ೭ ವಿಕೆಟ್ ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ 19 ವರ್ಷದೊಳಗಿನವರ ಏಕದಿನ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.
ಶಾರ್ಜಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು 46.2 ಓವರ್ ಗಳಲ್ಲಿ 173 ರನ್ ಗೆ ಆಲೌಟ್ ಮಾಡಿದ ಭಾರತ ತಂಡ 21.4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಫೈನಲ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಲಿದೆ.
ಭಾರತ ತಂಡಕ್ಕೆ 13 ವರ್ಷದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮಾತ್ರೆ ಮೊದಲ ವಿಕೆಟ್ ಗೆ 91 ರನ್ ಜೊತೆಯಾಟದ ಮೂಲಕ ಗೆಲುವಿನ ಭರವಸೆ ಮೂಡಿಸಿದರು. ಸೂರ್ಯವಂಶಿ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 67 ರನ್ ಸಿಡಿಸಿದರೆ , ಆಯುಷ್ 28ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 34 ರನ್ ಗಳಿಸಿದರು.
ನಂತರ ಆಂಡ್ರೆ ಸಿದ್ಧಾರ್ಥ್ (22) ಮತ್ತು ನಾಯಕ ಮೊಹಮದ್ ಸಿರಾಜ್ (ಅಜೇಯ 25) ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಭಾರತೀಯ ಬೌಲರ್ ಗಳ ನಿಖರ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತಕ್ಕೆ ಔಟಾಯಿತು. ಭಾರತದ ಪರ ಚೇತನ್ ಶರ್ಮ (3), ಕಿರಣ್ ಕೊರ್ಮಲೆ ಮತ್ತು ಆಯುಷ್ ಮಾತ್ರೆ ತಲಾ 2 ವಿಕೆಟ್ ಗಳಿಸಿದರು.
ಶ್ರೀಲಂಕಾ ಒಂದು ಹಂತದಲ್ಲಿ 8 ರನ್ ಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಲಕ್ವಿನ್ ಅಭಯಸಿಂಘೆ (67) ಮತ್ತು ಶಾರ್ಜುನ್ (42) ನಾಲ್ಕನೇ ವಿಕೆಟ್ ಗೆ 94 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಕಳಪೆ ಮೊತ್ತಕ್ಕೆ ಔಟಾಗುವ ಭೀತಿಯಿಂದ ಪಾರು ಮಾಡಿದರು