ಮುಂದಿನ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗಾಗಿ ಕ್ರಿಕೆಟಿಗರ ಮಿನಿ ಹರಾಜು ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಮಹಿಳೆಯರ ಪ್ರೀಮಿಯರ್ ಲೀಗಲ್ಲಿ ಒಟ್ಟು 5 ತಂಡಗಳು ಪಾಲ್ಗೋಳುತ್ತಿವೆ. ಅದರಲ್ಲಿ ಪ್ರತಿ ತಂಡವು 6 ವಿದೇಶಿ ಆಟಗಾರ್ತಿಯರನ್ನು ಒಳಗೊಂಡಂತೆ ಒಟ್ಟು 18 ಆಟಗಾರ್ತಿಯರನ್ನು ತಂಡದಲ್ಲಿ ಹೊಂದಿರಬೇಕು.
ಇದೇ ತಿಂಗಳ ಆರಂಭದಲ್ಲಿ ಎಲ್ಲಾ ತಂಡಗಳು ತಮ್ಮ ಉಳಿಕೆ ಪಟ್ಟಿಯನ್ನು ಪ್ರಕಟಿಸಿದ್ದವು. ಭಾಗಶಃ ತಂಡಗಳು ತಮ್ಮ ಕೋರ್ ತಂಡವನ್ನು ಉಳಿಸಿಕೊಂಡಿದ್ದು, ಕೆಲವೇ ಕೆಲವು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿವೆ.
ಈ ಬಾರಿಯ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ನ್ಯೂಜಿಲೆಂಡ್ ವೇಗದ ಬೌಲರ್ ಲೀ ತಾಹುಹು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೇಂಡ್ರಾ ಡಾಟಿನ್, ಭಾರತದ ಆಲ್ ರೌಂಡರ್ ಸ್ನೇಹ್ ರಾಣಾ, ಲೆಗ್ ಸ್ಪಿನ್ನರ್ ಪೂನಂ ಯಾದವ್ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಯಾರ ಕೈಲಿ ಎಷ್ಟು ಹಣ
ವಾಸ್ತವವಾಗಿ ಡಬ್ಲ್ಯುಪಿಎಲ್ ಹರಾಜಿನಲ್ಲಿ ಪ್ರತಿ ತಂಡಗಳ ಬಳಿ ಗಾತ್ರ 15 ಕೋಟಿ ರೂ. ಇರಲಿದೆ. ಇದೀಗ ಮಿನಿ ಹರಾಜು ನಡೆಯುತ್ತಿರುವ ಕಾರಣ ಫ್ರಾಂಚೈಸಿಗಳ ಬಳಿ ಕಡಿಮೆ ಹಣವಿರಲಿದೆ.
ಅದರಲ್ಲಿ ಗುಜರಾತ್ ಜೈಂಟ್ಸ್ ತಂಡವು ಗರಿಷ್ಠ 4.40 ಕೋಟಿ ರೂ.ಗಳೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದು, ಈ ತಂಡವು ಕೇವಲ 4 ಸ್ಲಾಟ್ ಗಳನ್ನು ಭರ್ತಿ ಮಾಡಬೇಕಿದೆ. ಯುಪಿ ವಾರಿಯರ್ಸ್ ತಂಡದ ಬಳಿ 3.90 ಕೋಟಿ ರೂ. ಇದ್ದು, ಹರಾಜಿನಲ್ಲಿ ಗರಿಷ್ಠ 3 ಆಟಗಾರ್ತಿಯರನ್ನು ಖರೀದಿಸಬೇಕಾಗಿದೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಈ ಬಾರಿ ಒಟ್ಟು 14 ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿಸಿದೆ. ಇದೀಗ ಅದರ ಬಳಿ 3.25 ಕೋಟಿ ರೂಪಾಯಿ ಉಳಿದಿದ್ದು, ಗರಿಷ್ಠ 4 ಆಟಗಾರ್ತಿಯರನ್ನು ಖರೀದಿಸಬಹುದಾಗಿದೆ. ಉಳಿದಂತೆ ಮುಂಬೈ ಇಂಡಿಯನ್ಸ್ ಬಳಿ 2.65 ಕೋಟಿ ರೂ. ಇದೆ. ಅತ್ತ ಡೆಲ್ಲಿ ತಂಡ 14 ಆಟಗಾರರನ್ನು ಉಳಿಸಿಕೊಂಡಿದ್ದು, ಅದರ ಬಳಿ ಕೇವಲ 2.5 ಕೋಟಿ ರೂ. ಹಣವಿದೆ.