ಇಬ್ಬರ ಯುವಕರ ವಿರುದ್ಧ ಸುಳ್ಳು ಡ್ರಗ್ಸ್ ಪ್ರಕರಣ ದಾಖಲಿಸಿದ್ದ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಬನಶಂಕರಿ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಶ್ರೀಧರ್ ಗೌರಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಎಸ್.ಕೆ.ರಾಜು ಮತ್ತು ಕಾನ್ ಸ್ಟೇಬಲ್ ಗಳಾದ ಸತೀಶ್ ಬಗಾಲಿ ಹಾಗೂ ತಿಮ್ಮಣ್ಣ ಪೂಜಾರಿ ಅವರನ್ನು ಅಮಾನತು ಮಾಡಲಾಗಿದೆ.
ಆಗಸ್ಟ್ 9ರಂದು ಕದಿರೇನಹಳ್ಳಿಯ ಸೀಮೆಂಟ್ ರಸ್ತೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರ ಬಳಿ 400 ಗ್ರಾಂ ಡ್ರಗ್ಸ್ ಪತ್ತೆಯಾಗಿತ್ತು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮಾಹಿತಿದಾರ ರಾಜೇಶ್ ನೀಡಿದ ಸುಳ್ಳಿನ ಮಾಹಿತಿ ಆಧರಿಸಿ ಮಕ್ಕಳನ್ನು ಬಂಧಿಸಲಾಗಿದೆ. ಮಕ್ಕಳ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದು, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆಯುಕ್ತರು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಸಿಪಿಗೆ ತನಿಖೆ ನಡೆಸಲು ಆದೇಶಿಸಿದ್ದರು.
ಯುವಕರ ವಿರುದ್ಧ ವೈಯಕ್ತಿಕ ದ್ವೇಷ ಹೊಂದಿದ್ದ ರಾಜನ್ ನೀಡಿದ ಸುಳ್ಳು ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದೂ ಅಲ್ಲದೇ ಸಮರ್ಪಕ ವಿಚಾರಣೆ ನಡೆಸದೇ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯಲ್ಲಿ ದೃಢಪಟ್ಟಿತ್ತು.
ಇತ್ತೀಚೆಗಷ್ಟೇ ಹೈಕೋರ್ಟ್ ನಕಲಿ ಡ್ರಗ್ಸ್ ಕೇಸು ದಾಖಲಿಸಿ ಯುವಕರನ್ನು ಬಂಧಿಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ನೀಡಿತ್ತು.