ಗಂಡ ಪ್ರತಿದಿನ ಸ್ನಾನ ಮಾಡಲ್ಲ ಅಂತ ಮದುವೆಯಾದ 40ನೇ ದಿನಕ್ಕೆ ಡಿವೋರ್ಸ್ ಗಾಗಿ ಪತ್ನಿ ಕೋರ್ಟ್ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಗಂಡ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಸ್ನಾನ ಮಾಡುತ್ತಾನೆ. ಇದರಿಂದ ಆತನ ಬೆವರು ವಾಸನೆ ತಡೆಯಲು ಆಗುತ್ತಿಲ್ಲ ಎಂದು ಪತ್ನಿ ನ್ಯಾಯಾಲಯಕ್ಕೆ ದೂರು ನೀಡಿದ್ದಾಳೆ.
ಆಗ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ಮಹಿಳೆ, ಸ್ವಚ್ಚತೆ ಬಗ್ಗೆ ಗಮನ ಹರಿಸದ ಈ ವ್ಯಕ್ತಿಯ ಜೊತೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.
ಗಂಡನನ್ನು ಪ್ರಶ್ನಿಸಿದಾಗ ಆತ ನೀಡಿದ ಉತ್ತರ ಅಚ್ಚರಿ ಮೂಡಿಸಿತ್ತು. ಏಕೆಂದರೆ ಆತ ತಿಂಗಳಿಗೆ ಒಂದು ಅಥವಾ ಎರಡು ಸಲ ಮಾತ್ರ ಸ್ನಾನ ಮಾಡುವುದಂತೆ. ವಾರಕ್ಕೊಮ್ಮೆ ಗಂಗಾಜಲ (ಗಂಗಾ ನದಿ ನೀರು) ಪ್ರೊಕ್ಷಣೆ (ಒಂದೆರಡು ಹನಿ ಮೈಮೇಲೆ ಹಾಕಿಕೊಳ್ಳುವುದು) ಮಾಡಿಕೊಳ್ಳುತ್ತಾನಂತೆ.
ಮದುವೆ ಆದ 40 ದಿನಗಳಲ್ಲಿ ಪತ್ನಿಯ ಬಲವಂತಕ್ಕೆ ಮಣಿದು 6 ಬಾರಿ ಸ್ನಾನ ಮಾಡಿದ್ದಾನಂತೆ. ಇದೇ ವಿಷಯವಾಗಿ ಗಂಡ-ಹೆಂಡತಿ ನಡುವೆ ವಾಗ್ವಾದ ನಡೆದಿದ್ದು, ಅದು ಜಗಳಕ್ಕೆ ತಿರುಗಿದ್ದರಿಂದ ಪತ್ನಿ ತವರು ಮನೆಗೆ ಮರಳಿದ್ದಳು.
ಇದೇ ವೇಳೆ ಪತ್ನಿ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಆರೋಪದಡಿ ಕೇಸು ದಾಖಲಿಸಿದ್ದಾರೆ. ಮತ್ತೊಂದೆಡೆ ಪೊಲೀಸರು ಪತಿಗೆ ಪ್ರತಿದಿನ ಸ್ನಾನ ಮಾಡುವಂತೆ ಮನವೊಲಿಸಿದ್ದಾರೆ.
ಪ್ರಕರಣದ ವಿಚಾರಣೆ ನಡುವೆ ಪೊಲೀಸರು ಸೆಪ್ಟೆಂಬರ್ 22ರಂದು ಕೌನ್ಸಿಲಿಂಗ್ ಗೆ ಆಗಮಿಸುವಂತೆ ದಂಪತಿಗೆ ಸೂಚಿಸಿದ್ದಾರೆ.