ಪತ್ನಿಯನ್ನು ತನ್ನ ತಂಗಿ ಎಂದು ಪರಿಚಯಿಸಿಕೊಂಡ ಯುವಕ ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿಜಯ್ ರಾಜ್ ಗೌಡ 1.53 ಕೋಟಿ ವಂಚಿಸಿರುವುದಾಗಿ 29 ವರ್ಷದ ಯುವತಿ ಕೆಂಗೇರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಜಯ್ ಗೌಡ ವಿವಾಹಿತನಾಗಿದ್ದರೂ ಸಹ ಪತ್ನಿಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಿದ್ದಾರೆ ಎಂದು ನೊಂದ ಯುವತಿ ದೂರಿನಲ್ಲಿ ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ನಲ್ಲಿ ವಾಸವಿದ್ದ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡನ ಪರಿಚಯವಾಗಿತ್ತು. ‘ತಾನು ಓರ್ವ ಉದ್ಯಮಿ 715 ಕೋಟಿ ರೂ. ಮೌಲ್ಯದ ಆಸ್ತಿಯಿದೆ’. ಜಾರಿ ನಿರ್ದೇಶನಾಲಯ (ಇ.ಡಿ)ದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ದೊರೆತಿದೆ ಎಂದು ಹೇಳಿಕೊಂಡಿದ್ದ. ಬಳಿಕ ಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ ಸೌಮ್ಯ ಎಂಬಾಕೆಯನ್ನು ತನ್ನ ಸಹೋದರಿ ಹಾಗೂ ತಂದೆ ಬೊರೇಗೌಡ ನಿವೃತ್ತ ತಹಶಿಲ್ದಾರ್ ಎಂದು ಪರಿಚಯಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವ್ಯವಹಾರ ಮಾಡಲು ಪ್ರೇರೇಪಿಸಿ ಸಾಲ ಪಡೆದು ವಂಚನೆ: ಪರಿಚಯ ಗಟ್ಟಿಯಾದ ನಂತರ, ‘ತನ್ನ ಆಸ್ತಿಯ ಸಂಬಂಧ ಇ.ಡಿ.ಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಮತ್ತು ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌ಗಳಿವೆ’ ಎಂದು ಸುಳ್ಳು ಹೇಳಿ ಕೆಲವು ನಕಲಿ ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ಯುವತಿಗೆ ತೋರಿಸಿದ್ದ.
ಹಣದ ಅವಶ್ಯಕತೆ ಇದೆ ಎಂದು ಹೇಳಿ ಆರಂಭದಲ್ಲಿ 15 ಸಾವಿರ ರೂ. ಪಡೆದಿದ್ದ. ನಂತರ, ಒಟ್ಟಿಗೆ ವ್ಯವಹಾರ ಮಾಡೋಣ ಎಂದು ನಂಬಿಸಿ ಯುವತಿಯ ಹೆಸರಿನಲ್ಲಿ ಸಾಲ ಮಾಡಿಸಿದ್ದಲ್ಲದೆ, ಆಕೆಯ ಸ್ನೇಹಿತರ ಬಳಿಯೂ ಸಾಲ ಮಾಡಿಸಿದ್ದ. ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಸುಳ್ಳು ಹೇಳಿ ಯುವತಿಯ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ, ಲಕ್ಞಾಂತರ ರೂಪಾಯಿ ಸಾಲ ಪಡೆದಿದ್ದ. ಹಂತ-ಹಂತವಾಗಿ, ಯುವತಿ, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಒಟ್ಟು 1.53 ಕೋಟಿ ರೂಪಾಯಿ ಹಣ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ವಾಪಸ್ ನೀಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತರು ಒತ್ತಾಯಿಸಿದಾಗ ಆರಂಭದಲ್ಲಿ ಸ್ವಲ್ಪ ಹಣ ಮರಳಿಸಿದ್ದ. ಆದರೆ, ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಲ್ಲದೆ, ಹಣ ಕೇಳಿದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾನೆ.
ಹಣ ವಾಪಸ್ ಕೇಳಲು ಹೋದಾಗ, ವಿಜಯ್ ರಾಜ್ ಗೌಡ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇರುವುದು ತಿಳಿದಿದೆ. ಸಹೋದರಿ ಎಂದು ಪರಿಚಯಿಸಿದ್ದವರೇ ಆರೋಪಿಯ ಪತ್ನಿ ಎಂದು ತಿಳಿದಿದೆ ಎಂದು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.
ವಿಜಯ್ ರಾಜ್ ಗೌಡ, ಆತನ ತಂದೆ ಬೊರೇಗೌಡ ಮತ್ತು ಸೌಮ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



