ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್ ಮನ್ ಫಾಫ್ ಡು ಪ್ಲೆಸಿಸ್ ಕೇವಲ 2 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟುಕೊಟ್ಟಿದೆ. ಅಲ್ಲದೇ ಐಪಿಎಲ್ ನ ಅತ್ಯಂತ ದುಬಾರಿ ಸ್ಪಿನ್ನರ್ ಕೃನಾಲ್ ಪಾಂಡ್ಯ ಅವರನ್ನು 5.75 ಕೋಟಿ ರೂ.ಗೆ ಖರೀದಿಸಿ ಅಚ್ಚರಿ ಮೂಡಿಸಿದೆ.
ಅಬುಧಾಬಿಯ ಜೆಡಾಹ್ ನಲ್ಲಿ ನಡೆಯುತ್ತಿರುವ ಎರಡನೇ ದಿನವಾದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆರ್ ಸಿಬಿ ಆಟಗಾರರ ಖರೀದಿಯಲ್ಲಿ ಮತ್ತೆ ಎಡವಿದೆ.
ಮೊದಲ ದಿನ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಬಿಟ್ಟುಕೊಟ್ಟಿದ್ದ ಆರ್ ಸಿಬಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಬಿಟ್ಟುಕೊಟ್ಟಿದೆ.
2 ಕೋಟಿ ರೂ. ಮೂಲಧನ ಹೊಂದಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸದೇ ಇದ್ದರೂ ರೈ ಟು ಮ್ಯಾಚ್ ಕಾರ್ಡ್ ಬಳಸಿ ಉಳಿಸಿಕೊಳ್ಳುವ ಪ್ರಯತ್ನವನ್ನೂ ಆರ್ ಸಿಬಿ ಮಾಡಲಿಲ್ಲ. ಇದರಿಂದ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ಕಡಿಮೆ ಮೊತ್ತಕ್ಕೆ ಬೇರೆ ತಂಡದ ಪಾಲಾಗಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಸ್ಪಿನ್ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅತ್ಯಂತ ದುಬಾರಿ ಬೌಲರ್ ಆಗಿದ್ದರೂ ಅವರನ್ನು 5.75 ಕೋಟಿ ರೂ.ಗೆ ಬಿಡ್ ಮಾಡಿ ಆರ್ ಸಿಬಿ ಖರೀದಿಸಿದೆ.
ಐಪಿಎಲ್ ನಲ್ಲಿ ಮಿಂಚಿದ್ದ ಅಜಿಂಕ್ಯ ರಹಾನೆ, ಕರ್ನಾಟಕದ ಕೆಎಸ್ ಭರತ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಆಲ್ ರೌಂಡರ್ ಶಾರ್ದೂಲ್ ಠಾಕೂರ್, ಪೃಥ್ವಿ ಶಾ ಸೇರಿದಂತೆ ಪ್ರಮುಖ ಆಟಗಾರರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸದೇ ಅಚ್ಚರಿ ಮೂಡಿಸಿದವು.