ಭಾರೀ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಗಿದೆ.
ಹೆಣ್ಣೂರು ಬಳಿಯ ಹೊರಮಾವು ಅಗ್ರಹಾರ ಸಮೀಪದ ಬಾಬಾ ಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಮಂಗಳವಾರ ಮಧ್ಯಾಹ್ನ ಕುಸಿದುಬಿದ್ದಿದ್ದು, 5 ಮಂದಿ ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ. 15 ಮಂದಿಯನ್ನು ರಕ್ಷಿಸಲಾಗಿದೆ.
ರಾತ್ರಿಯಿಡೀ ಅವಶೇಷಗಳಡಿ ಸಿಲುಕಿದವರ ಪತ್ತೆಕಾರ್ಯ ನಡೆಯಿತು. ಮಧ್ಯರಾತ್ರಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನು ಕೆಲವರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಹೊರ ತೆಗೆಯಲು ಜೆಸಿಬಿ, ಹಿಟಾಚಿಗಳ ಮೂಲಕ ಕುಸಿದ ಕಟ್ಟಡದ ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಳಗೆ ಸುಮಾರು 20 ಮಂದಿ ಇದ್ದರು ಎಂದು ಹೇಳಲಾಗಿದೆ. ಕಟ್ಟಡದಲ್ಲಿದ್ದ ಹಲವು ಕಾರ್ಮಿಕರು ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದರು. ಸುಮಾರು 16 ಗಂಟೆಯ ಕಾರ್ಯಾಚರಣೆಯಲ್ಲಿ ಆವಶೇಷಗಳಗಡಿ ಸಿಲುಕಿದ್ದ ಆಯೇಷ್ ಎಂಬಾತನನ್ನು ರಕ್ಷಿಸಲಾಗಿದೆ.
ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಬುಧವಾರವೂ ಮುಂದುವರಿಸಿದ್ದಾರೆ. ಕಟ್ಟಡ ಕುಸಿದ ಸ್ಥಳಕ್ಕೆ ಸಚಿವ ಕೆಜೆ ಜಾರ್ಜ್ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭೇಟಿ ನೀಡಿ ಪರಿಹಾರ ಕಾರ್ಯದ ಪರಿಶೀಲನೆ ನಡೆಸಿದ್ದಾರೆ.
60×40 ಸೈಟ್ ನಲ್ಲಿ ಅಕ್ರಮವಾಗಿ 6 ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿತ್ತು. ಬೆಂಗಳೂರಿನಲ್ಲಿ ಅಕ್ರಮವಾಗಿ ಎತ್ತರ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.