ಭೋವಿ ನಿಗಮದ ಅಕ್ರಮದ ಕುರಿತು ತನಿಖೆ ವೇಳೆ ಸಿಸಿಬಿ ಪೊಲೀಸರು ಬೆತ್ತಲೆಗೊಳಿಸಿ 25 ಲಕ್ಷ ರೂ.ಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್ ಲಭಿಸಿದೆ.
ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ್ದ 34 ವರ್ಷದ ಜೀವಾ ಎಂಬಾಕೆ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಜೀವಾ 11 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ತನಿಖೆ ವೇಳೆ ಪೊಲೀಸರ ಪೈಶಾಕಿಕ ಕೃತ್ಯವನ್ನು ಬಯಲಿಗೆ ಎಳೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದೆ.
ಸಿಐಡಿ ವಿಚಾರಣೆಯಿಂದ ನನಗೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿದ್ದೇನೆ ಎಂದು ಅವರು ತಮ್ಮ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿತ್ತು. ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮಿ ವಿರುದ್ಧ ಮೃತಳ ಸಹೋದರಿ ಸಹ ಗಂಭೀರ ಆರೋಪ ಮಾಡಿದ್ದರು.
ಜೀವಾ ಪೀಠೋಪಕರಣಗಳ ಅಂಗಡಿ ನಡೆಸುತ್ತಿದ್ದು, ವಕೀಲೆ ಕೂಡ ಆಗಿದ್ದರು. ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಜೀವಾ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ಮಾರನೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿಚಾರಣೆ ವೇಳೆ ಸೈನೈಡ್ ವಿಷ ಏನಾದರೂ ತಂದಿದ್ದೀರಾ ಎಂದು ತಪಾಸಣೆ ಮಾಡುವ ನೆಪದಲ್ಲಿ ಜೀವಾ ಅವರನ್ನು ಪೊಲೀಸರು ಬೆತ್ತಲೆಗೊಳಿಸಿದ್ದರು. ವಿಚಾರಣೆ ವೇಳೆ ಹಿಂಸೆ ನೀಡಿದ್ದೂ ಅಲ್ಲದೇ ಆಕೆಯ ಬೆತ್ತಲೆ ಫೋಟೊ ತೋರಿಸುವುದಾಗಿ ಬೆದರಿಸಿ 25 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದರು ಎಂದು ಜೀವಾ ಡೆತ್ ನೋಟ್ ನಲ್ಲಿ ವಿವರಿಸಿದ್ದರು.