ಬಾಲಿವುಡ್ ನ ಖ್ಯಾತ ಹಿನ್ನೆಲೆ ಗಾಯಕ ಹಾಗೂ ಗಝಲ್ ಗಾಯಕ ಪಂಕಜ್ ಉದಾಸ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಅಸುನೀಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್ ಉದಾಸ್ ಗುಜರಾತ್ ನ ಜೈಪುರದಲ್ಲಿ ಜನಿಸಿದ್ದು, ಸಂಗೀತ ಕುಟುಂಬದಿಂದ ಬಂದಿದ್ದರು.
ಸಾಜನ್ ಚಿತ್ರದ ಜಿಯೇ ತೋ ಜಿಯೇ ಕೈಸೆ, ನಾಮ್ ಚಿತ್ರದ ಚಿಟ್ಟಿ ಆಯಿ ಯೇ ಚಿಟ್ಟಿ ಆಯಿ ಯೇ ಸೇರಿದಂತೆ ಹಲವು ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಪಂಕಜ್ ಉದಾಸ್ ಬಾಲಿವುಡ್ ನಲ್ಲಿ ಮೆಲೋಡಿ ಹಾಡುಗಳಿಗೆ ಜೀವ ತುಂಬುತ್ತಿದ್ದರು.
1980ರಲ್ಲಿ ಆಹಾಟ್ ಆಲ್ಬಂ ಹಾಡುಗಳಿಂದ ವೃತ್ತಿಜೀವನ ಆರಂಭಿಸಿದ ಪಂಕಜ್ ಉದಾಸ್, ಇದುವರೆಗೆ ಸುಮಾರು 50 ಆಲ್ಬಂಗಳಿಗೆ ಧ್ವನಿಯಾಗಿದ್ದಾರೆ. ಮಹೇಶ್ ಭಟ್ ನಿರ್ದೇಶನದ ನಾಮ್ ಚಿತ್ರದ ಚಿಟ್ಟಿ ಆಯಿ ಯೇ ಹಾಡಿನ ಮೂಲಕ ಬಾಲಿವುಡ್ ನಲ್ಲಿ ಮನೆ ಮಾತಾಗಿದ್ದರು.
ಘಾಯಲ್, ಮೊಹ್ರಾ ಸಾಜನ್, ಯೆ ದಿಲ್ಲಗಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದರು.
2006ರಲ್ಲಿ ಪಂಕಜ್ ಉದಾಸ್ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ಪಂಕಜ್ ಉದಾಸ್ ಅವರ ನಿಧನದ ಸುದ್ದಿಯನ್ನು ಅವರ ಮಗಳು ನಯಾಬ್ ಉದಾಸ್ ಪ್ರಕಟಿಸಿದ್ದು, ಮಾರ್ಚ್ 27ರಂದು ಮುಂಬೈನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ತಿಳಿಸಿದ್ದಾರೆ.