ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಜಾತ್ರೆ ವೇಳೆ ಸ್ಫೋಟ ಸಂಭವಿಸಿದ್ದರಿಂದ ಒಬ್ಬ ಮೃತಪಟ್ಟು, 23 ಮಂದಿ ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ ಜಾತ್ರಾ ಮಹೋತ್ಸವದ ವೇಳೆ ಪಟಾಕಿ ಸಿಡಿಸುವ ವೇಳೆ ಸ್ಫೋಟ ಸಂಭವಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಪುರಿ ಜಗನ್ನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಗುಂಪೊಂದು ಪಟಾಕಿ ಹೊಡೆದು ಸಂಭ್ರಮಿಸುತ್ತಿತ್ತು. ಈ ವೇಳೆ ಪಟಾಕಿಯೊಂದು ಹಾರಿ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ಪಟಾಕಿಯ ಮೇಲೆ ಬಿದ್ದು ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ನರೇಂದ್ರ ಪುಷ್ಪಕರ್ಣಿ ಬಳಿ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿ ಪಟಾಕಿ ಭಕ್ತರ ಮೇಲೆ ಚಿಮ್ಮಿತು. ಇದರಿಂದ ರಕ್ಷಿಸಿಕೊಳ್ಳಲು ಭಕ್ತರು ಪುಷ್ಕರಿಣಿಗೆ ಜಿಗಿದಿದ್ದಾರೆ.
ಘಟನೆಯಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದು, ಗಾಯಗೊಂಡವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಸಿದ್ದಾರೆ.