ಸೇನಾ ಸಿಬ್ಬಂದಿಯನ್ನು ಹೊತ್ತ ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ರೈಲು ಸ್ಫೋಟಕ್ಕೆ ವಿಫಲ ಯತ್ನ ಮಧ್ಯಪ್ರದೇಶದ ಬುರ್ಹಾನ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಕರ್ನಾಟಕಕ್ಕೆ ಬರುತ್ತಿದ್ದ ಸೈನಿಕರಿದ್ದ ರೈಲು ಸ್ಫೋಟಿಸುವ ಯತ್ನ ಮಧ್ಯಪ್ರದೇಶದ ಸಗ್ಫಾಟ ರೈಲು ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದ್ದು, ರೈಲ್ವೇ ಹಳಿಯ ಮೇಲೆ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ.
ರೈಲು ಡಿಟೋನೇಟರ್‍ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟ ಉಂಟಾಗುವಂತೆ ಸಂಚು ರೂಪಿಸಲಾಗಿತ್ತು. ರೈಲ್ವೆ ಪೈಲೆಟ್ ಅನುಮಾನಗೊಂಡು ರೈಲನ್ನು ತಕ್ಷಣವೇ ನಿಲ್ಲಿಸಿದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.