ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕೆಆರ್ ಎಸ್ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಭರ್ತಿಗೆ 4 ಅಡಿಗಳಷ್ಟೇ ನೀರು ಬಾಕಿ ಇದೆ. ಭಾನುವಾರದ ವೇಳೆಗೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದ್ದು, ನೀರಿನ ಒಳಹರಿವು ಗಮನಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಆಗಲಿದೆ. ಇದರಿಂದ ನದಿ ಪಾತ್ರದ ಸುಮಾರು 92 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರು, ಆಸ್ತಿಪಾಸ್ತಿ ರಕ್ಷಿಸಿಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಳೆದ 5 ದಿನದಲ್ಲಿ 15 ಟಿಎಂಸಿಯಷ್ಟು ನೀರು ಹರಿದುಬಂದಿದೆ.
124.80 ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ ಶನಿವಾರ 120 ಅಡಿಯಷ್ಟು ನೀರು ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಕೇವಲ 4 ಅಡಿಯಷ್ಟು ಮಾತ್ರ ಬಾಕಿ ಇದ್ದು, ಭಾನುವಾರ ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. ಜಲಾಶಯಕ್ಕೆ 51,374 ಕ್ಯುಸೆಕ್ ಒಳಹರಿವು ಬರುತ್ತಿದೆ.
ಕಾವೇರಿ ನದಿ ನೀರು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 11 ಸಾವಿರ ಕ್ಯೂಸೆಕ್ಸ್ಗಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಇದರಿಂದ ಈ ಬಾರಿ ಕಾವೇರಿ ನೀರಿಗಾಗಿ ಎರಡೂ ರಾಜ್ಯಗಳ ನಡುವಣ ಕಿತ್ತಾಟ ಬಗೆಹರಿಯಲಿದೆ.
ಕೆಆರ್‌ಎಸ್ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 120.00 ಅಡಿ
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 42.916
ಟಿಎಂಸಿ ಒಳ ಹರಿವು – 51,374
ಕ್ಯೂಸೆಕ್ಸ್ ಹೊರ ಹರಿವು – 10,714 ಕ್ಯುಸೆಕ್