ಅಬ್ ಕೀ ಬಾರ್ 400 ಪಾರ್ (ಈ ಬಾರಿ 400ಕ್ಕಿಂತ ಅಧಿಕ) ಎಂದು ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುತ್ತಿದ್ದರೆ, ಪ್ರತಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಕನಿಷ್ಠ 100 ಸ್ಥಾನ ಗೆಲ್ಲುವ ಗುರಿ ಹೊಂದಿದೆ.
ಕಳೆದೆರಡು ಲೋಕಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿರುವ ಕಾಂಗ್ರೆಸ್ ಈ ಬಾರಿ ಮೂರಂಕಿಯ ಸಾಧನೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಕಾಂಗ್ರೆಸ್ 100 ಸ್ಥಾನಗಳ ಮೇಲಷ್ಟೇ ಕಣ್ಣಿಟ್ಟಿದೆ.
ಲೋಕಸಭೆಗೆ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಹಾಗೂ ಅಭಿಯಾನದ ಮುಖ್ಯಸ್ಥರ ಪ್ರಕಾರ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳು ಜನರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಿದ್ದು, ಈ ಬಾರಿ 100ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
ಕಾಂಗ್ರೆಸ್ ಮೈತ್ರಿ ಪಕ್ಷಗಳು 130ರಿಂದ 145 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇರಳದಲ್ಲಿ ಪ್ರತಿ ಬಾರಿ ಆಡಳಿತ ಪಕ್ಷದ ವಿರುದ್ಧ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲುತ್ತಾ ಬಂದಿವೆ. ಈ ಬಾರಿ ಕೂಟ ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ಕೇರಳದ ವಯನಾಡು ಸೇರಿದಂತೆ ಕೇರಳದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ ಬಿಜೆಪಿ ಕಳೆದ ಬಾರಿ 25 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಅರ್ಧದಷ್ಟು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ಹೊಂದಿದೆ. ಇದಕ್ಕೆ ಕಾರಣ ಬಿಜೆಪಿ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು.
ತೆಲಂಗಾಣದಲ್ಲಿ ಕಾಂಗ್ರೆಸ್ ಎರಡಂಕಿಯ ಸ್ಥಾನ ಗೆಲ್ಲುವ ಭರವಸೆ ಹೊಂದಿದೆ. ಆಂಧ್ರಪ್ರದೇಶದಲ್ಲೂ ಉತ್ತಮ ಸಾಧನೆಯ ನಿರೀಕ್ಷೆ ಇದ್ದರೆ, ತಮಿಳುನಾಡಿನಲ್ಲಿ ಮೈತ್ರಿ ಪಕ್ಷವಾದ ಡಿಎಂಕೆ ಕ್ಲೀನ್ ಸ್ವೀಪ್ ಮಾಡುವ ಸಾಧ್ಯತೆ ಇದೆ. ಇದರ ಲಾಭವೂ ಕಾಂಗ್ರೆಸ್ ಗೆ ಆಗಲಿದೆ ಎಂದು ಊಹಿಸಲಾಗಿದೆ.
ಉಳಿದಂತೆ ಉತ್ತರ ಭಾರತದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಲಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಉತ್ತಮ ಸಾಧನೆಯ ನಿರೀಕ್ಷೆ ಹೊಂದಿದೆ. ಉತ್ತರ ಪ್ರದೇಶದಲ್ಲಿ ಎರಡಂಕಿಯ ಸ್ಥಾನ ಗೆದ್ದರೂ ದೊಡ್ಡ ಸಾಧನೆ ಎಂಬುದು ಲೆಕ್ಕಾಚಾರವಾಗಿದೆ.