ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದಿರುವ ಹಿನ್ನೆಲೆಯಲ್ಲಿ 1000ಕ್ಕೂ ಹೆಚ್ಚು ಮಂದಿ ತವರಿಗೆ ಭಾರತೀಯ ವಿದ್ಯಾರ್ಥಿಗಳು ಮರಳಿದ್ದು, ಇನ್ನು 5000 ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ.
ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಓದಲು ಬಾಂಗ್ಲಾದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶ, ಮೇಘಾಲಯ, ಹರಿಯಾಣ ಮತ್ತು ಜಮ್ಮು ಕಾಶ್ಮೀರದ ಸಾವಿರಾರು ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಿದ್ದಾರೆ. ಇದುವರೆಗೆ 728 ಮಂದಿ ವಿವಿಧ ಭೂ ಮಾರ್ಗದಿಂದ ಭಾರತಕ್ಕೆ ಅಧಿಕೃತವಾಗಿ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5000ಕ್ಕೂ ಅಧಿಕ ವಿದ್ಯಾರ್ಥಿಗಳು ಬಾಂಗ್ಲಾದೇಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಾಂಗ್ಲಾದೇಶದಿಂದ ಟ್ಯಾಕ್ಸಿ ಮುಂತಾದ ವಾಹನಗಳ ನೆರವಿನೊಂದಿಗೆ 6 ಗಂಟೆಗಳ ಕಾಲ ಪ್ರಯಾಣಿಸಿ ಸ್ವದೇಶಕ್ಕೆ ಮರಳಿದ್ದಾರೆ. ಸುಮಾರು 1000 ವಿದ್ಯಾರ್ಥಿಗಳು ಗಡಿ ದಾಟಿ ಬಂದಿದ್ದಾರೆ ಎಂದು ಮೇಘಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಭೂತಾನ್ ಮತ್ತು ನೇಪಾಳದ ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಬಂದಿದ್ದಾರೆ.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಕೆಲವು ದಿನಗಳಿಂದ ತೀವ್ರ ಸ್ವರೂಪ ಪಡೆದಿದ್ದು, ಶುಕ್ರವಾರ ಪ್ರತಿಭಟನಾಕಾರರು ಜೈಲಿಗೆ ನುಗ್ಗಿ ಬೆಂಕಿ ಹಚ್ಚಿದ್ದರಿಂದ ನೂರಾರು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 105 ಮಂದಿ ಮೃತಪಟ್ಟಿದ್ದು, 2500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ವಿಕೋಪಕ್ಕೆ ತೆರಳುತ್ತಿದ್ದು, ದೇಶದೆಲ್ಲೆಡೆ ಹಬ್ಬುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಈಶಾನ್ಯ ರಾಜ್ಯಗಳ ಮೂಲಕ ಬಾಂಗ್ಲಾದೇಶಕ್ಕೆ ಗಡಿ ದಾಟಿ ಹೋಗಿದ್ದ ಉತ್ತರ ಭಾರತದ ನೂರಾರು ವಿದ್ಯಾರ್ಥಿಗಳ ಸ್ಥಿತಿ ಅತಂತ್ರಗೊಂಡಿದ್ದು, ತವರಿಗೆ ಮರಳುತ್ತಿದ್ದಾರೆ. ಇದೇ ವೇಳೆ ಗಡಿ ದಾಟಿ ಬರುವಾಗ 100ಕ್ಕೂ ಹೆಚ್ಚು ಮಂದಿ ಗಡಿ ಭದ್ರತಾ ಪಡೆ ಜೊತೆ ಹೋರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಢಾಕಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಕಾಲಿಟ್ಟ ನಂತರ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆ ಉಂಟಾಗಿದ್ದು, ತ್ರಿಪುರದ ಅಗರ್ತಾಲಾ ಮತ್ತು ಮೇಘಾಲಯದ ದ್ವಾರಾಕ ಮೂಲಕ ತವರಿಗೆ ಮರಳುತ್ತಿದ್ದಾರೆ.
ನಾವು ಕೆಲವು ದಿನಗಳಿಂದ ಪರಿಸ್ಥಿತಿ ತಿಳಿಯಾಗಬಹುದು ಎಂದು ಕಾದು ನೋಡಿದೆವು. ಆದರೆ ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ಶಾಂತಿ ಬರುವುದು ಸಾಧ್ಯವಿಲ್ಲ ಎಂದು ತಿಳಿದು ತವರಿಗೆ ಮರಳಲು ನಿರ್ಧರಿಸಿದ್ದೇವೆ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.