ಪೊಲೀಸ್ ನೇಮಕಾತಿಗಾಗಿ ನಡೆದ ದೈಹಿಕ ಪರೀಕ್ಷೆ ವೇಳೆ 11 ಮಂದಿ ಅಭ್ಯರ್ಥಿಗಳು ಮೃತಪಟ್ಟ ಘಟನೆ ಜಾರ್ಖಂಡ್ ನಲ್ಲಿ ಸಂಭವಿಸಿದೆ.
ಜಾರ್ಖಂಡ್ ಅಬಕಾರಿ ಪೊಲೀಸ್ ಹುದ್ದೆಗಾಗಿ ಆಗಸ್ಟ್ 20ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿದ್ದು, ಇದರಲ್ಲಿ ಉತ್ತೀರ್ಣರಾದವರಿಗೆ ನಡೆದ ದೈಹಿಕ ಪರೀಕ್ಷೆಯಲ್ಲಿ ಈ ದುರಂತ ಸಂಭವಿಸಿದೆ.
ರಾಂಚಿ, ಗಿರಿಧ್, ಹರಜಿಭಾಗ್, ಪಲಾಮು, ಪೂರ್ವ ಸಿಂಗಬಮ್ ಮತ್ತು ಸಾಹೇಬ್ ಗಂಜ್ ಜಿಲ್ಲೆಯ 7 ಕೇಂದ್ರಗಳಲ್ಲಿ ದೈಹಿಕ ಪರೀಕ್ಷೆ ನಡೆಯುತ್ತಿದ್ದು, ಪಲಾಮುನಲ್ಲಿ ನಾಲ್ವರು, ಗಿರಿದ್ ಮತ್ತು ಹಜರಿಭಾಗ್ ನಲ್ಲಿ ತಲಾ ಇಬ್ಬರು, ಸಿಂಗ್ ಬಮ್ ಮತ್ತು ಸಾಹೇಬ್ ಗಂಜ್ ಮತ್ತು ರಾಂಚಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ದೈಹಿಕ ಪರೀಕ್ಷೆ ವೇಳೆ ಸಂಭವಿಸಿದ ಸಾವಿನ ಪ್ರಕರಣಗಳನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದು, ತನಿಖೆಗೆ ಆದೇಶಿಸಲಾಗಿದೆ. ಅಲ್ಲದೇ ದೈಹಿಕ ಪರೀಕ್ಷೆ ವೇಳೆ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸೆಗೆ ಔಷಧ ಮತ್ತು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 30ರಂದು ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ 1,27,772 ಮಂದಿ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು. 78,023 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.