ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸಿಡಿಸಿದ ಶತಕ ಹಾಗೂ ಆಶಾ ಶೋಭಾನಾ ಮಾರಕ ದಾಳಿ ನೆರವಿನಿಂದ ಭಾರತ ವನಿತೆಯರ ತಂಡ 143 ರನ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ. ಈ ಮೂಲಕ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 37.4 ಓವರ್ ಗಳಲ್ಲಿ 122 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು.
ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ಭಾರತದ ಮಾರಕ ದಾಳಿಗೆ ತತ್ತರಿಸಿ ಸತತ ಕುಸಿತ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ಸುನೆ ಲ್ಲುಸ್ (33) ಮತ್ತು ಮರಿಜಾನೆ ಕ್ಯಾಪ್ (24) ಮತ್ತು ಸಿನಾಲೊ ಜಾಫ್ಟಾ (27) ಮಾತ್ರ ತಕ್ಕಮಟ್ಟಿಗೆ ಹೋರಾಟ ನಡೆಸಿದರು.
ಭಾರತದ ಪರ ಆಶಾ 21 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ದೀಪ್ತಿ ಶರ್ಮ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂದಾನ 127 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 117 ರನ್ ಗಳಿಸಿ ತಂಡವನ್ನು ಆಧರಿಸಿದರು. ಕೊನೆಯ ಹಂತದಲ್ಲಿ ದೀಪ್ತಿ ಶರ್ಮ (37) ಮತ್ತು ಪೂಜಾ ವಸ್ತ್ರಾಕರ್ (31) ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.