ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕೇರಳದ ಕಾಸರಗೋಡಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಪಟಾಕಿ ಸ್ಫೋಟ ದುರಂತದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 10 ಮಂದಿ ಸ್ಥಿತಿ ಗಂಭೀರವಾಗಿದೆ.
ಉತ್ತರ ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬ ಸ್ವಾಗತಿಸಲು ಸಂಗ್ರಹಿಸಲಾಗಿದ್ದ ಅಂಜುತಾಂಬಲಮ್ ವೀರೇರ್ಕಾವು ಎಂಬಲ್ಲಿ ಶೆಡ್ ನಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗಳು ಸ್ಫೋಟಗೊಂಡಿವೆ.
ಸೋಮವಾರ ತಡರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಒಂದು ಪಟಾಕಿ ಆಕಸ್ಮಿಕವಾಗಿ ಶೆಡ್ ಮೇಲೆ ಬಿದ್ದಿದ್ದರಿಂದ ಸಂಗ್ರಹಿಸಲಾಗಿದ್ದ ಪಟಾಕಿಗಳು ಏಕಾಏಕಿ ಸಿಡಿದಿವೆ. ಇದರಿಂದ ಪಟಾಕಿ ಹೊಡೆಯುವ ಸಂಭ್ರಮ ವೀಕ್ಷಿಸುತ್ತಿದ್ದ ನಾಗರಿಕರು ಗಾಯಗೊಂಡಿದ್ದಾರೆ.
ಏಕಾಏಕಿ ಸಂಗ್ರಹಿಸಲಾಗಿದ್ದ ಎಲ್ಲಾ ಪಟಾಕಿಗಳು ಸ್ಫೋಟಗೊಂಡಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿಕೊಂಡಿದ್ದು, ಜನರು ದಿಕ್ಕಾಪಾಲಾಗಿ ಓಡುವ ಆತುರದಲ್ಲಿ ಕೆಲವರು ಗಾಯ ಮಾಡಿಕೊಂಡಿದ್ದಾರೆ.
ಶೆಡ್ ಬಳಿ ತುಂಬಾ ಜನ ನೆರೆದಿದ್ದು, ಸ್ಫೋಟದಿಂದ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸುಮಾರು 10 ಮಂದಿ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
28 ಸಾವಿರ ರೂ. ಮೌಲ್ಯದ ಕಡಿಮೆ ಸಾಂದ್ರತೆಯ ಪಟಾಕಿಗಳನ್ನು ಸ್ಥಳೀಯರು ತರಿಸಿದ್ದು, ಶೆಡ್ ನಲ್ಲಿ ಇರಿಸಿದ್ದರು. ಆಕಸ್ಮಿಕವಾಗಿ ಪಟಾಕಿ ಶೆಡ್ ನಲ್ಲಿ ಬಿದ್ದಿದ್ದರಿಂದ ಸ್ಫೋಟ ಸಂಭವಿಸಿ ಅನಾಹುತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.