ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲರ್ ಗಳ ನಡುವಿನ ತೀವ್ರ ಪೈಪೋಟಿಯಿಂದ ಮೊದಲ ದಿನವೇ 17 ವಿಕೆಟ್ ಗಳು ಪತನಗೊಂಡಿದ್ದು, ಅಲ್ಪ ಮೊತ್ತಕ್ಕೆ ಕುಸಿದರೂ ಭಾರತ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.
ಪರ್ತ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ ಚಹಾ ವಿರಾಮಕ್ಕೂ ಮುನ್ನವೇ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಗೆ ಪತನಗೊಂಡಿತು. ನಂತರ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ದಿನದಾಂತ್ಯಕ್ಕೆ 67 ರನ್ ಗೆ 7 ವಿಕೆಟ್ ಕಳೆದುಕೊಂಡು ಕಂಗಾಲಾಗಿದೆ.
ಭಾರತ ತಂಡ ಮುನ್ನಡೆ ಪಡೆಯಬೇಕಾದರೆ 83 ರನ್ ಗಳ ಅಗತ್ಯವಿದ್ದರೆ, ಆಸ್ಟ್ರೇಲಿಯಾ ಮುನ್ನಡೆ ಸಾಧಿಸಲು ಕೈಯಲ್ಲಿ ಕೇವಲ 3 ವಿಕೆಟ್ ಉಳಿಸಿಕೊಂಡಿದ್ದು, ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದ್ದಾರೆ.
ಭಾರತ ತಂಡವನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಿದ ಸಂಭ್ರಮದಲ್ಲಿ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡಕ್ಕೆ ಬುಮ್ರಾ ಆಘಾತ ನೀಡಿದರು. 19 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಮಾರ್ನೂಸ್ ಲುಕೆನ್ಸ್ ಬರ್ಗ್ ರನ್ ಗಳಿಸುವುದಿರಲಿ ವಿಕೆಟ್ ಉಳಿಸಿಕೊಳ್ಳಲು ಪರದಾಡಿದರು. ಅಂತಿಮವಾಗಿ 52 ಎಸೆತಗಳಲ್ಲಿ ಕೇವಲ 2 ರನ್ ಬಾರಿಸಿ ಸಿರಾಜ್ ಗೆ ಔಟಾದರು.
ಅಲೆಕ್ಸ್ ಕ್ಯಾರಿ 28 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 19 ರನ್ ಬಾರಿಸಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿ ವಿಕೆಟ್ ಉಳಿಸಿಕೊಂಡರು. ಭಾರತದ ಪರ ಬುಮ್ರಾ 4 ವಿಕೆಟ್ ಪಡೆದು ಗಮನ ಸೆಳೆದರೆ, ಮೊಹಮದ್ ಸಿರಾಜ್ 2 ಮತ್ತು ಹರ್ಷಿತ್ ರಾಣಾ 1 ವಿಕೆಟ್ ಗಳಿಸಿದರು.