ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಜನವರಿ 22ರಂದು ನಡೆದ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಸಮಾರಂಭಕ್ಕೆ 113 ಕೋಟಿ ರೂ. ವೆಚ್ಚವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ರಾಮ ಮಂದಿರ ನಿರ್ಮಾಣಕ್ಕೆ ಇಲ್ಲಿಯವರೆಗೆ 1,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಎರಡು ಹಂತಗಳ ನಿರ್ಮಾಣಕ್ಕೆ ಹೆಚ್ಚುವರಿ 670 ಕೋಟಿ ರೂ. ಖರ್ಚಾಗಬಹುದು ಎಂದು ಟ್ರಸ್ಟ್ ತನ್ನ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿದೆ.
2023-24 ರ ಆರ್ಥಿಕ ವರ್ಷದ ವಾರ್ಷಿಕ ಲೆಕ್ಕಪತ್ರಗಳನ್ನು ಟ್ರಸ್ಟಿಗಳ ಮಂಡಳಿಯ ಮುಂದೆ ಮಂಡಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇವಸ್ಥಾನಕ್ಕೆ ಸುಮಾರು 20 ಕೆಜಿ ಚಿನ್ನ ಮತ್ತು 13 ಕ್ವಿಂಟಾಲ್ ಬೆಳ್ಳಿ ದೇಣಿಗೆಯಾಗಿ ಬಂದಿದೆ.
ಮಂದಿನ ಖರ್ಚಿನ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಏಪ್ರಿಲ್ 1, 2024 ಮತ್ತು ಮಾರ್ಚ್ 31, 2025 ರ ನಡುವಿನ ಒಟ್ಟು ಯೋಜಿತ ವೆಚ್ಚವು 850 ಕೋಟಿ ರೂ. ಆಗಬಹುದು ಎಂದು ತಿಳಿಸಿದರು.
2023-24ರ ಹಣಕಾಸು ವರ್ಷದಲ್ಲಿ 676 ಕೋಟಿ ರೂ.ಒಟ್ಟು ವೆಚ್ಚವಾಗಿದೆ. ಈ ಪೈಕಿ 540 ಕೋಟಿ ರೂ. ದೇವಸ್ಥಾನ ನಿರ್ಮಾಣಕ್ಕೆ ಬಳಕೆಯಾಗಿದ್ದರೆ, 136 ಕೋಟಿ ರೂ. ಪ್ರತಿಷ್ಠಾಪನಾ ಸಮಾರಂಭ ಸೇರಿ ಇತರೆ ಕೆಲಸಗಳಿಗೆ ಖರ್ಚು ಮಾಡಲಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ 363.34 ಕೋಟಿ ರೂ. ಆದಾಯ ಬಂದಿದ್ದು, ಇದರಲ್ಲಿ 204 ಕೋಟಿ ರೂಪಾಯಿ ಬ್ಯಾಂಕ್ ಬಡ್ಡಿಯ ಮೂಲಕ ಬಂದಿದೆ. ಚೆಕ್, ನಗದು ಮೂಲಕ 58 ಕೋಟಿ ರೂ. ಬಂದರೆ, ದೇಣಿಗೆ ಬಾಕ್ಸ್ ನಲ್ಲಿ 24.5 ಕೋಟಿ ರೂ., ಆನ್ಲೈನ್ ಮೂಲಕ 71 ಕೋಟಿ ರೂ., ವಿದೇಶಗಳಿಂದ 10.43 ಕೋಟಿ ರೂ. ಬಂದಿದೆ.