ಸ್ಪೇನ್ ನ 21 ವರ್ಷದ ಕಾರ್ಲೊಸ್ ಅಲ್ಕರಾಜ್ ಮೊದಲ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಫ್ರೆಂಚ್ ಓಪನ್ ಗೆದ್ದ ಸ್ಪೇನ್ ನ 7ನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಕಾರ್ಲೊಸ್ ಅರ್ಲರಾಜ್ 4 ಗಂಟೆ 19 ನಿಮಿಷಗಳ ಕಾಲ ನಡೆದ 5 ಸೆಟ್ ಗಳ ರೋಚಕ ಹೋರಾಟದಲ್ಲಿ ಜರ್ಮನಿಯ ಅಲೆಗ್ಸಾಂಡರ್ ಜ್ವೆರೆವ್ ವಿರುದ್ಧ ಜಯ ಸಾಧಿಸಿದರು.
ಕಾರ್ಲೊಸ್ ಅಲ್ಕರಾಜ್ 6-2, 2-6, 5-7, 6-1, 6-2 ಸೆಟ್ ಗಳಿಂದ ಅಲೆಗ್ಸಾಂಡರ್ ಅವರನ್ನು ಸೋಲಿಸಿದರು. ಈ ಮೂಲಕ ರಾಫೆಲ್ ನಡಾಲ್, ಸೆರ್ಗಿ ಬ್ರುಗೆರಿಯಾ, ಅಲ್ಬರ್ಟ್ ಕೋಸ್ಟ, ಕಾರ್ಲೊಸ್ ಮೊಯಾ, ಜುವಾನ್ ಕಾರ್ಲೊಸ್ ಫೆರಾರೊ ಮತ್ತು ಆಂಡ್ರಿಯಾಸ್ ಜಿಮೆನೊ ನಂತರ ಫ್ರೆಂಚ್ ಓಪನ್ ಗೆದ್ದ 7ನೇ ಆಟಗಾರ ಎನಿಸಿಕೊಂಡರು.
2017ರ ಆಸ್ಟ್ರೇಲಿಯನ್ ಓಪನ್ ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಗಳಲ್ಲಿ ರೋಜರ್ ಫೆಡರರ್ 5 ಸೆಟ್ ಗಳ ಪಂದ್ಯದಲ್ಲಿ ಗೆದ್ದ ನಂತರ ಈ ಸಾಧನೆ ಮಾಡಿದ ಮೊದಲಿಗ ಎಂಬ ಮತ್ತೊಂದು ದಾಖಲೆಗೆ ಕಾರ್ಲೊಸ್ ಪಾತ್ರರಾಗಿದ್ದಾರೆ.
ಯುಎಸ್ ಓಪನ್ ನ ಹಾರ್ಡ್ ಕೋರ್ಟ್ ಮತ್ತು ವಿಂಬಲ್ಡನ್ ನ ಹಸಿರು ಕೋರ್ಟ್ ಮತ್ತು ಫ್ರೆಂಚ್ ಓಪನ್ ನ ಆವೆ ಅಂಕಣದ ಸೇರಿದಂತೆ ಮೂರು ಭಿನ್ನ ಕೋರ್ಟ್ ಗಳಲ್ಲಿ ಟ್ರೋಫಿ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕಾರ್ಲೊಸ್ ಬರೆದರು.