ಆರಂಭಿಕ ಅಭಿಷೇಕ್ ಶರ್ಮ ಚೊಚ್ಚಲ ಶತಕ ಹಾಗೂಋ ಋತುರಾಜ್ ಗಾಯಕ್ವಾಡ್ ಅವರ ಸಿಡಿಲಬ್ಬರದ ಅರ್ಧಶತಕದ ಸಹಾಯದಿಂದ ಭಾರತ ತಂಡ 2ನೇ ಟಿ-20 ಪಂದ್ಯದಲ್ಲಿ ಜಿಂಬಾಬ್ವೆಗೆ 235 ರನ್ ಗಳ ಬೃಹತ್ ಗುರಿ ಒಡ್ಡಿದೆ.
ಹರಾರೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತು.
ನಾಯಕ ಶುಭಮನ್ ಗಿಲ್ ಸತತ ಎರಡನೇ ಪಂದ್ಯದಲ್ಲೂ ವಿಫಲವಾದರು. ಆದರೆ ಅಭಿಷೇಕ್ ಶರ್ಮ ಮತ್ತು ಋತುರಾಜ್ ಗಾಯಕ್ವಾಡ್ ಎರಡನೇ ವಿಕೆಟ್ ಗೆ 137 ರನ್ ಜೊತೆಯಾಟದಿಂದ ತಂಡ ಬೃಹತ್ ಮೊತ್ತದ ಸೂಚನೆ ನೀಡಿದರು.
ಅಭಿಷೇಕ್ ಶರ್ಮ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ ಬರೋಬ್ಬರಿ 100 ರನ್ ಸಂಪಾದಿಸಿ ಶತಕದ ಗೌರವದೊಂದಿಗೆ ನಿರ್ಗಮಿಸಿದರು. ಋತುರಾಜ್ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 77 ರನ್ ಬಾರಿಸಿ ಔಟಾಗದೇ ಉಳಿದರು.
ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ರಿಂಕು ಸಿಂಗ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 47 ರನ್ ಬಾರಿಸಿ ಔಟಾಗದೇ ಉಳಿದರು. ಮುರಿಯದ ಮೂರನೇ ವಿಕೆಟ್ ಗೆ 93 ರನ್ ಜೊತೆಯಾಟದಿಂದ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಜಿಂಬಾಬ್ವೆ ಬೌಲರ್ ಗಳು ಈ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು.