ಕನ್ನಡಿಗರಿಗೆ ಖಾಸಗಿ ಉದ್ಯಮಗಳಲ್ಲಿ ಉದ್ಯೋಗ ಮೀಸಲು ನೀಡಬೇಕು ಎಂಬ ರಾಜ್ಯ ಸರ್ಕಾರದ ತೀರ್ಮಾನ ಸಂಚಲನ ಸೃಷ್ಟಿಸಿದ್ದು, ಉದ್ದಿಮೆದಾರರು ಆಕ್ಷೇಪ ವ್ಯಕ್ತಪಡಿಸಿವೆ.
ಕೈಗಾರಿಕೆ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಶೇ.50ರಷ್ಟು, ಮ್ಯಾನೇಜ್ ಮೆಂಟ್ ಅಲ್ಲದ ಹುದ್ದೆಗಳಲ್ಲಿ ಶೇ.75 ಹಾಗೂ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟು ಮೀಸಲು ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಜನಿಸಿರಬೇಕು ಅಥವಾ ಕನಿಷ್ಠ 15 ವರ್ಷ ವಾಸವಾಗಿರಬೇಕು. ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು. ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕು. ಇಂತಹವರನ್ನು ಕನ್ನಡಿಗರು ಎಂದು ಪರಿಗಣಿಸಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ನೀಡಬೇಕು ಎಂದು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದ್ದು, ಇದೇ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ.
ರಾಜ್ಯ ಸರ್ಕಾರದ ತೀರ್ಮಾನಕ್ಕೆ ಉದ್ದಿಮೆದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ನಮಗೆ ಪ್ರತಿಭಾವಂತ ಹಾಗೂ ಕೌಶಲ ಹೊಂದಿರುವ ಉದ್ಯೋಗಿಗಳು ಬೇಕು. ಇಲ್ಲಿ ಭಾಷಾ ಮೀಸಲು ತರಲು ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿವೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದು, ನಾವು ಕನ್ನಡಿಗರೇ ಆಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದರೂ ನಮಗೆ ಕನ್ನಡ ಓದಲು ಬರೆಯಲು ಬರಲ್ಲ. ಅಂತಹದ್ದರಲ್ಲಿ ಉದ್ಯೋಗಿಗಳಿಂದ ಹೇಗೆ ನಿರೀಕ್ಷೆ ಮಾಡಲು ಸಾಧ್ಯ? ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಕನ್ನಡಿಗರು ಕೆಲಸ ಮಾಡಲು ಬರುವುದೇ ಇಲ್ಲ. ಅಲ್ಲದೇ ನಮ್ಮ ಸಂಸ್ಥೆಗೆ ಅನುಕೂಲವಾದ ಪ್ರತಿಭೆಗಳೇ ಬೇಕೇ ಹೊರತು ಭಾಷೆ ವಿಷಯ ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.