ಏರ್ ಇಂಡಿಯಾ 22 ಸಾವಿರ ರೂ. ವೇತನದ 2216 ಹುದ್ದೆಗಳಿಗೆ ಕರೆದಿದ್ದ ಸಂದರ್ಶನಕ್ಕೆ 25 ಸಾವಿರ ಅಭ್ಯರ್ಥಿಗಳು ಮುಗಿಬಿದ್ದ ಘಟನೆ ವಾಣಿಜ್ಯನಗರಿ ಮುಂಬೈನಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಗುಜರಾತ್ ನಲ್ಲಿ ಖಾಸಗಿ ಕಂಪನಿ ಕರೆದಿದ್ದ 5 ಹುದ್ದೆಗೆ ಸಾವಿರಾರು ವಿದ್ಯಾರ್ಥಿಗಳು ಮುಗಿಬಿದ್ದಿದ್ದರಿಂದ ಕಾಲ್ತುಳಿತದ ಭೀತಿ ಉಂಟಾಗಿತ್ತು. ಇದೀಗ ಮುಂಬೈನಲ್ಲೂ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದ್ದು, ದೇಶದಲ್ಲಿ ನಿರುದ್ಯೋಗ ಸಮಸ್ಯೆಯ ಚಿತ್ರಣ ನೀಡುತ್ತಿತ್ತು.
ಬುಧವಾರ ನೇರ ಸಂದರ್ಶನ ಕರೆದಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಂಕ್ಷಿಗಳು ಮುಗಿಬಿದ್ದಿದ್ದರಿಂದ ಏರ್ ಇಂಡಿಯಾ ಸಿಬ್ಬಂದಿ ನಿಯಂತ್ರಿಸಲು ಪರದಾಡುವಂತಾಯಿತು. ಒಂದು ಹಂತದಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸುವ ಆತಂಕವೂ ಉಂಟಾಗಿತ್ತು.
ಏರ್ ಇಂಡಿಯಾ ಸಂಸ್ಥೆ ದೇಶದ ವಿಮಾನ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಸಿಬ್ಬಂದಿಗೆ ಅರ್ಜಿ ಆಹ್ವಾನಿಸಿದ್ದು, 22,000 ವೇತನ ನಿಗದಿಪಡಿಸಿತ್ತು. ಈ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಲಗೇಜ್ ಸರಬರಾಬು, ಲಗೇಜ್ ಬೇಲ್ಟ್ ಗೆ ಲಗೇಜ್ ಹಾಕುವುದು, ಟ್ರ್ಯಾಕ್ಟರ್ ನಿರ್ವಹಣೆ ಕೆಲಸ ಮಾಡಬೇಕಿದ್ದು, ಪ್ರತಿಯೊಂದು ವಿಮಾನ ನಿಲ್ದಾಣದಲ್ಲೂ ಕನಿಷ್ಠ 5 ಸಿಬ್ಬಂದಿ ಬೇಕಾಗಿದೆ.
ಅರ್ಜಿ ಸಲ್ಲಿಸಲು ಕೌಂಟರ್ ಬಳಿ ಅಭ್ಯರ್ಥಿಗಳು ಮುನ್ನುಗ್ಗಲು ಪ್ರಯತ್ನಿಸುತ್ತಿದ್ದರು. ಇದರಿಂದ ಗೊಂದಲ ಉಂಟಾಯಿತು. ಏರ್ ಇಂಡಿಯಾ ಸಿಬ್ಬಂದಿ ಅರ್ಜಿ ಸ್ವೀಕರಿಸಲು ವಿಳಂಬ ಮಾಡಿದ್ದರಿಂದ ಊಟ, ನೀರು ಇಲ್ಲದೇ ಕೆಲವರು ಅಸ್ವಸ್ಥಗೊಂಡಿದ್ದರು.