ಪ್ರವಾಸಿ ನ್ಯೂಜಿಲೆಂಡ್ ಸ್ಪಿನ್ನರ್ ಮಿಚಲ್ ಸ್ಯಾಂಟ್ನರ್ ಮಾರಕ ದಾಳಿ ಹಾಗೂ ಟಾಮ್ ಲಾಥಮ್ ಅರ್ಧಶತಕದ ನೆರವಿನಿಂದ 2ನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯನ್ನು 301 ರನ್ ಗೆ ವಿಸ್ತರಿಸುವ ಮೂಲಕ ಎರಡನೇ ದಿನದಾಟದಲ್ಲಿ ಮೇಲುಗೈ ಸಾಧಿಸಿದೆ.
ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 1 ವಿಕೆಟ್ ಗೆ 16 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 156 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 53 ರನ್ ಗಳ ಮುನ್ನಡೆ ಪಡೆದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದೆ. ಈ ಮೂಲಕ ಪ್ರವಾಸಿ ತಂಡ ಒಟ್ಟಾರೆ 301 ರನ್ ಗಳ ಮಹತ್ವದ ಮುನ್ನಡೆ ಪಡೆದಿದ್ದು, ಮುನ್ನಡೆ ಅಂತರ ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದೆ.
ನ್ಯೂಜಿಲೆಂಡ್ ತಂಡಕ್ಕೆ ಎರಡನೇ ಇನಿಂಗ್ಸ್ ನಲ್ಲಿ ನಾಯಕ ಟಾಮ್ ಲಾಥಮ್ 133 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 86 ರನ್ ಬಾರಿಸಿ ಆಸರೆಯಾದರು. ಆದರೆ ಮತ್ತೊಂದೆಡೆ ಭಾರತೀಯರ ಬೌಲರ್ ಗಳ ಒತ್ತಡದಿಂದ ಉಳಿದ ಬ್ಯಾಟ್ಸ್ ಮನ್ ಗಳು ಸಾಧಾರಣ ಮೊತ್ತಕ್ಕೆ ಔಟಾದರು.
ಡೆವೊನ್ ಕಾನ್ವೆ (17), ವಿಲ್ ಯಂಗ್ (23), ಡರೇಲ್ ಮಿಚೆಲ್ (18) ಮತ್ತು ಟಾಮ್ ಬ್ಲಂಡೆಲ್ (ಅಜೇಯ 30) ತಂಡದ ಮೊತ್ತವನ್ನು 200ರ ಗಡಿ ಸಮೀಪ ಕೊಂಡೊಯ್ದಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದ್ದ ವಾಷಿಂಗ್ಟನ್ ಸುಂದರ್ ಎರಡನೇ ಇನಿಂಗ್ಸ್ ನಲ್ಲೂ 4 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಮಾರಕ ದಾಳಿಗೆ ತತ್ತರಿಸಿ ವಿಕೆಟ್ ಕೈ ಚೆಲ್ಲಿದ್ದರಿಂದ 156 ರನ್ ಗಳ ಸಾಧಾರಣ ಮೊತ್ತಕ್ಕೆ ಆಲೌಟಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶ ಕಳೆದುಕೊಂಡರು.
ಸ್ಯಾಂಟ್ನರ್ ವೃತ್ತಿಜೀವನದ ಶ್ರೇಷ್ಠ ದಾಳಿ ನಡೆಸಿ 7 ವಿಕೆಟ್ ಗೊಂಚಲು ಪಡೆದರು. ಭಾರತದ ಪರ ಯಾವೊಬ್ಬ ಬ್ಯಾಟ್ಸ್ ಮನ್ ಅರ್ಧಶತಕ ಕೂಡ ದಾಖಲಿಸದೇ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜಾ (38), ಶುಭಮನ್ ಗಿಲ್ (30), ಯಶಸ್ವಿ ಜೈಸ್ವಾಲ್ (30), ರಿಷಭ್ ಪಂತ್ (18) ಮತ್ತು ವಾಷಿಂಗ್ಟನ್ ಸುಂದರ್ (18) ತಕ್ಕಮಟ್ಟಿಗೆ ಹೋರಾಟ ನಡೆಸಿದರು.