ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಅಬ್ಬರದ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 12 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಜೈಪುರದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 185 ರನ್ ಪೇರಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಡೆಲ್ಲಿಗೆ ಸತತ 2ನೇ ಸೋಲಾದರೆ, ರಾಜಸ್ಥಾನ್ ರಾಯಲ್ಸ್ ಗೆ 2ನೇ ಗೆಲುವಾಗಿದೆ.
ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 30 ರನ್ ಗೆ 2 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ಡೇವಿಡ್ ವಾರ್ನರ್ (49) ಮತ್ತು ಟ್ರಿಸ್ಟಾನ್ ಸ್ಟಬ್ಸ್ (44) ಮೂರನೇ ವಿಕೆಟ್ ಗೆ 67 ರನ್ ಪೇರಿಸಿ ಹೋರಾಟ ನಡೆಸಿದರು. ಆದರೆ ಇವರ ನಂತರ ಬ್ಯಾಟ್ಸ್ ಮನ್ ಗಳ ರನ್ ಸರಾಸರಿ ಕಾಯ್ದುಕೊಳ್ಳದೇ ಕೊನೆಯ ಹಂತದಲ್ಲಿ ಎಡವಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಕೂಡ 36 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಅಖಾಡಕ್ಕೆ ಇಳಿದ ರಿಯಾನ್ ಪರಾಗ್ 45 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸೇರಿದ 84 ರನ್ ಸಿಡಿಸಿ ತಂಡವನ್ನು ಆಧರಿಸಿದರು.
ಪರಾಗ್ ಮತ್ತು ರವಿಚಂದ್ರನ್ ಅಶ್ವಿನ್ 4ನೇ ವಿಕೆಟ್ ಗೆ 54 ರನ್ ಜೊತೆಯಾಟ ನಿಭಾಯಿಸಿದರು. ಅಶ್ವಿನ್ 19 ಎಸೆತಗಳಲ್ಲಿ 3 ಸಿಕ್ಸರ್ ಸೇರಿದ 29 ರನ್ ಸಿಡಿಸಿದರು. ನಂತರ ಬಂದ ಧ್ರುವ ಜುರೆಲ್ (20) ತಂಡದ ಮೊತ್ತ ಉಬ್ಬಿಸಿದರು.