ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಜ್ರಗಳು ರಾಮನಗರ ಮತ್ತು ದಾವಣಗೆರೆಯಲ್ಲಿ ಪತ್ತೆಯಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, ರಾಮನಗರದ ಹೆಜ್ಜಾಲದಲ್ಲಿ ಹಾಗೂ ದಾವಣಗೆರೆಯಲ್ಲಿ ಎರಡು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನಾಭರಣ ಪತ್ತೆ ಹಚ್ಚಲಾಗಿದೆ.
ರಾಮನಗರದ ಹೆಜ್ವಾಲ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ, 10 ಕೆಜಿಯಷ್ಟು ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್ ಗೋಲ್ಡ್ & ಡೈಮಂಡ್ ಕಂಪನಿಗೆ ಸೇರಿದ್ದು ಎನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿದ್ದರಿಂದ ಅಧಿಕಾರಿಗಳು ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆ ತೋರಿಸಿ, ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 12.50 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರವನ್ನು ದಾವಣಗೆರೆಯ ನಗರದ ಲೋಕಿಕೆರೆ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ. ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸುತ್ತಿದ್ದ ಚಿನ್ನಾಭರಣವನ್ನು ಸೂಕ್ತ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.