ತೆಂಗಿನ ಚಿಪ್ಪು ಪುಡಿ ಬೆರೆಸಿದ 300 ಕೆಜಿ ಚಹಾ ಪುಡಿಯನ್ನು ಆಹಾರ ಸುರಕ್ಷತಾ ಕಾರ್ಯಾಪಡೆ ಹೈದರಾಬಾದ್ ನ ಖ್ಯಾತ ಟೀ ಕಂಪನಿಯ ಹೋಲ್ ಸೇಲ್ ಮಾರಾಟಗಾರರ ಬಳಿ ಪತ್ತೆಹಚ್ಚಿದ್ದು, ಮೂವರನ್ನು ಬಂಧಿಸಿದೆ.
ಪ್ರತಿಷ್ಠಿತ ಕೋನಾರ್ಕ್ ಟೀ ಕಂಪನಿ ಕಟ್ಟಡದ ಮೇಲೆ ಕಾರ್ಯಪಡೆ ಅಕ್ಟೋಬರ್ 8ರಂದು ದಾಳಿ ಮಾಡಿದ್ದು, ಟೀ ಪುಡಿಯನ್ನು ಕಲಬೆರಕೆ ಮಾಡಿ ಹೈದರಾಬಾದ್ ನ ಸಣ್ಣ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದ್ದನ್ನು ಪತ್ತೆ ಹಚ್ಚಿದೆ.
ದಾಳಿಯಲ್ಲಿ 300 ಕೆಜಿ ಟೀ ಪುಡಿ, 200 ಕೆಜಿ ತೆಂಗಿನ ಚಿಪ್ಪಿನ ಪುಡಿ, 5 ಕೆಜಿ ಕೃತಕ ಕೆಂಪು ಮತ್ತು ಕಂದು ಬಣ್ಣ ಮತ್ತು ಕೃತಕ ಚಾಕೋಲೇಟ್ ಮತ್ತು ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ.
ಕೊನಾರ್ಕ್ ಕಂಪನಿಯ ಹೆಸರಿನ ಪ್ಯಾಕೆಟ್ ನಲ್ಲಿ ಕಲಬೆರಕೆ ಟೀ ಪುಡಿ ಸೇರಿಸಿ ಹೈದರಾಬಾದ್ ನಲ್ಲಿ ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.