ಬಾಂಗ್ಲಾದೇಶದಲ್ಲಿ ಮೀಸಲು ಕುರಿತ ಪ್ರತಿಭಟನೆ ವೇಳೆ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ನಡುವಣ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೃತಪಟ್ಟವರ ಸಂಖ್ಯೆ 32ಕ್ಕೇರಿದೆ.
ಸ್ವಾತಂತ್ರ್ಯ ಯೋಧರಿಗೆ ಭದ್ರತಾ ಇಲಾಖೆಯಲ್ಲಿ ಮೀಸಲು ನೀಡಬೇಕು ಎಂಬ ನಿಲುವಿನ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಜುಲೈ 1ರಿಂದ ನಡೆಯುತ್ತಿದ್ದು, ಗುರುವಾರ ಹಿಂಸಾರೂಪ ಪಡೆದಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾ ಅಲ್ಲದೇ ಚಿತ್ತಾಗಾಂಗ್, ರಂಗ್ ಪುರ್ ಮತ್ತು ಕುಮಿಲ್ಲಾ ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ದೊಣ್ಣೆ, ಕೋಲು, ಕಲ್ಲು ಹಿಡಿದು ಸೇನಾ ಸಿಬ್ಬಂದಿ ಮೇಲೆ ಎರಗಿದರು. ಇದರಿಂದ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ.
ಢಾಕಾದಲ್ಲಿರುವ ಟಿವಿ ಮುಖ್ಯ ಕಚೇರಿಗೆ ಪ್ರತಿಭಟನಾಕಾರರು ಬೆಂಕಿ ಹಾಕಿದ್ದಾರೆ. ಪ್ರಧಾನಿ ಖೇಶ್ ಹಸಿನಾ ಟಿವಿ ಕೇಂದ್ರಕ್ಕೆ ಭೇಟಿ ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಟಿವಿ ಕಚೇರಿಗೆ ಮುತ್ತಿಗೆ ಹಾಕಿ ಧ್ವಂಸಗೊಳಿಸಿದರು.
ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಪ್ರತಿಭಟನಕಾರಾರರ ಮೇಲೆ ರಬ್ಬರ್ ಬುಲೆಟ್ ಹಾರಿಸಿ ತಡೆಯಲು ಯತ್ನಿಸಿದರು. ಆದರೆ ಪ್ರತಿಭಟನೆ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದೆ.