ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತಕ್ಕೆ ಕಳೆದ 24 ಗಂಟೆಯಲ್ಲಿ ಸುರಿದ ರಣ ಮಳೆಯೇ ಕಾರಣ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಕೇರಳದ ವಯನಾಡು ಸುತ್ತಮುತ್ತಲ ಪ್ರದೇಶಗಳಲ್ಲಿ 372 ಮಿ.ಮೀ.ನಷ್ಟು ಭಾರೀ ಮಳೆಯಾಗಿದ್ದರಿಂದ ಭೂಕುಸಿತ ಹಾಗೂ ಜಲಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಣ ಭೀಕರ ಮಳೆಯ ಅಟ್ಟಹಾಸಕ್ಕೆ 200 ಮನೆಗಳು ಕೊಚ್ಚಿ ಹೋಗಿವೆ. ಇದುವರೆಗೂ ಲೆಕ್ಕಕ್ಕೆ ಸಿಕ್ಕಿರುವುದು 64 ಶವಗಳು ಇನ್ನು ಅದೆಷ್ಟು ಜೀವಗಳು ಹೋಗಿವೆಯೋ ಎಂದು ಊಹಿಸುವುದು ಕೂಡ ಕಷ್ಟವಾಗಿದೆ.
ರೈಲ್ವೆ ಹಳಿ, ಸೇತುವೆ ಕೊಚ್ಚಿ ಹೋಗಿದ್ದರು. ಹಲವಾರು ಗ್ರಾಮಗಳ ಸಂಪರ್ಕ ರಸ್ತೆಗಳೇ ಕಣ್ಮರೆ ಆಗಿವೆ. ಕೆಲವು ಕಡೆ ಊರಿಗೆ ಊರೆ ನಾಪತ್ತೆಯಾಗಿದೆ. ರಕ್ಷಣಾ ಪಡೆಗಳು ರಕ್ಷಣೆಗೆ ಹೋಗಲು ಕೂಡ ಸಾಹಸಪಡಬೇಕಾದ ಸನ್ನಿವೇಶ ಉಂಟಾಗಿದೆ.
ವಯನಾಡು ಕ್ಷೇತ್ರದ ಸಂಸದ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಜೊತೆ ಚರ್ಚಿಸಿ ಪರಿಹಾರ ಕಾರ್ಯದ ಕುರಿತು ಮಾತುಕತೆ ನಡೆಸಿದ್ದಾರೆ.
ಮೆಪ್ಪಾಡಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಭಾರೀ ಮಳೆಯ ನಡುವೆಯೂ ಎನ್ ಆಡಿಆರ್ ಎಫ್, ಪೊಲೀಸ್ ಸೇರಿದಂತೆ ಹಲವು ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿವೆ.
ಭಾರೀ ಮಳೆಯಿಂದ ಒಂದು ಸೇತುವೆ ಕೊಚ್ಚಿ ಹೋಗಿದ್ದು, ಹಲವಾರು ರಸ್ತೆಗಳು ನಾಪತ್ತೆಯಾಗಿವೆ. ಭೂಕುಸಿತದಿಂದ ಮುಂಡಕೈ, ಚೂರಲಮಲ, ಅಟ್ಟಮಲ ಮತ್ತು ನೂಲ್ ಪೂಜಾ ಪ್ರದೇಶಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, ಸಂಪರ್ಕ ಕಡಿತದಿಂದ ರಕ್ಷಣಾ ಕಾರ್ಯಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಹಾನಿಯಾದ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ. ರಕ್ಷಣಾ ಕಾರ್ಯಕ್ಕೆ ಹೆಲಿಕಾಫ್ಟರ್ ಬಳಕೆಗೆ ಸಿದ್ದವಾಗಿದೆ. ಆದರೆ ಹವಾಮಾನ ವೈಪರಿತ್ಯದಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.