ಗಣೇಶ ವಿಸರ್ಜನೆ ವೇಳೆ ಕೋಮುಗಲಭೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಮಂಗಳವಾರ ತಡರಾತ್ರಿ ನಡೆದ ಘಟನೆಯ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದರಿಂದ 20ಕ್ಕೂ ಹೆಚ್ಚು ಅಂಗಡಿಗಳು ಭಸ್ಮಗೊಂಡಿದೆ. ಘಟನೆಯಲ್ಲಿ ಪೊಲೀಸರು 52ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, 6ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ದುಷ್ಕರ್ಮಿಗಳು ಲಾಂಗು ಮಚ್ಚು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಘಟನೆ ಬೆನ್ನಲ್ಲೇ ಶನಿವಾರದವರೆಗೆ ನಾಗಮಂಗಲ ಪಟ್ಟಣದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬುಧವಾರ ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಂತಾಗಿದೆ.
ಘಟನೆ ಹಿನ್ನೆಲೆ
ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಡಿಜೆ ಸೌಂಡ್ ನಿಲ್ಲಿಸುವಂತೆ ಕೆಲವು ಕಿಡಿಗೇಡಿಗಳು ಜಗಳ ಶುರು ಮಾಡಿದ್ದಾರೆ. ಈ ವೇಳೆ ಅನ್ಯಕೋಮಿನ ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ದರ್ಗಾ ಬಳಿ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಮಾಡಿ ಕಲ್ಲು ತೂರಿದ್ದಾರೆ. ಈ ವೇಳೆ ಎರಡು ಗುಂಪಿನ ಯುವಕರ ಮಧ್ಯೆ ವಾಕ್ಸಮರ ಶುರುವಾಗಿದೆ.