ಬಿಸಿಗಾಳಿ ಅಬ್ಬರಕ್ಕೆ ಉತ್ತರ ಭಾರತ ತತ್ತರಿಸಿದ್ದು, ಕಳೆದ 24 ಗಂಟೆಯಲ್ಲಿ ಮೃತಪಟ್ಟವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಉತ್ತರ ಭಾರತದಲ್ಲಿ ಬಿಸಿಗಾಳಿಯಿಂದ ಉತ್ತರ, ಕೇಂದ್ರ ಹಾಗೂ ಈಶಾನ್ಯ ಭಾರತದ ರಾಜ್ಯಗಳು ತತ್ತರಿಸುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬಿಸಿಗಾಳಿಗೆ ಜನರು ತತ್ತರಿಸುವ ಬೆನ್ನಲ್ಲೇ ಮೇ 31ರಿಂದ ಜೂನ್ 1ರ ನಡುವೆ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಧೂಳಿನ ಬಿರುಗಾಳಿ ಬೀಸುವ ಭೀತಿ ಶುರುವಾಗಿದೆ. ಹರಿಯಾಣ ಮತ್ತು ಚಂಡೀಗಢದಲ್ಲಿ ಮೇ 31ರಂದು ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮೇ 31ರಿಂದ ಜೂನ್ 2ರ ನಡುವೆ ವಾಯುವ್ಯ ಭಾರತದ ರಾಜ್ಯಗಳಲ್ಲಿ ಗುಡುಗು ಮತ್ತು ಸಿಡಿಲಿನಿಂದ ಕೂಡಿದ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಬಿಸಿಗಾಳಿ ಪ್ರಮಾಣ ಕುಸಿಯಬಹುದು. ಆದರೆ ಉಳಿದೆಡೆ ಇನ್ನೂ ಕೆಲವು ದಿನ ಬಿಸಿಗಾಳಿ ಆತಂಕ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ದೆಹಲಿಯಲ್ಲಿ 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬಿಹಾರದಲ್ಲಿ ಬಿಸಿಗಾಳಿಗೆ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಗುರುವಾರ 2 ಗಂಟೆ ಅವಧಿಯಲ್ಲಿ ಔರಂಗಾಬಾದ್ ಆಸ್ಪತ್ರೆಯಲ್ಲಿ 17 ಮಂದಿ ಅಸುನೀಗಿದ್ದರು. ಅರಾಹ್ ನಲ್ಲಿ 6, ಗಯಾ ಮತ್ತು ರೊಹ್ಟಕ್ ನಲ್ಲಿ ತಲಾ 3, ಬುಕ್ಸರ್ ನಲ್ಲಿ 2 ಮತ್ತು ಪಾಟ್ನಾದಲ್ಲಿ 1 ಸಾವು ದಾಖಲಾಗಿದೆ.