ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದರೂ ಡೆಂಗ್ಯೂ ಕಾಯಿಲೆ ಅಬ್ಬರ ಮುಂದುವರಿದಿದ್ದು, 2 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಶುಕ್ರವಾರ 549 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ಒಟ್ಟಾರೆ 13,268 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಹಾಸನ ಮತ್ತು ಬಳ್ಳಾರಿಯಲ್ಲಿ ತಲಾ ಒಂದು ಸಾವು ವರದಿಯಾಗಿದೆ.
ಹಾಸನದ ಹೊಳೆನರಸೀಪುರಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಕುಶಾಲ್ ಡೆಂಗ್ಯೂ ಕಾಯಿಲೆಗೆ ಬಲಿಯಾದರೆ, ಯುವಕನ ತಾಯಿ ರೇಖಾ ಅವರಿಗೆ ಡೆಂಗ್ಯೂ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಹಾಸನದಲ್ಲಿ ಇದುವರೆಗೆ ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 7ಕ್ಕೇರಿದೆ.
ಬಳ್ಳಾರಿಯಲ್ಲಿ ರೇಖಾ ಎಂಬ ಯುವತಿ ಡೆಂಗ್ಯೂಗೆ ಬಲಿಯಾಗಿದ್ದು, ದಾವಣಗೆರೆಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿದ ಬೆನ್ನಲ್ಲೇ ಡೆಂಗ್ಯೂ ಕಾಣಿಸಿಕೊಂಡಿತ್ತು. ಬಳ್ಳಾರಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.