ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ಬಹುತೇಕ ಮುಕ್ತಾಯಗೊಂಡಿದ್ದು, ಶೇ.60ರಷ್ಟು ಮತದಾನವಾಗಿದೆ.
ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಮಣಿಪುರ, ಪಶ್ಚಿಮ ಬಂಗಾಳ ಸೇರಿದಂತೆ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಶುಕ್ರವಾರ ಮತದಾನವಾಯಿತು.
ದೇಶಾದ್ಯಂತ ಸಂಜೆ 6 ಗಂಟೆಯವರೆಗೆ ಶೇ.59.71ರಷ್ಟು ಮತದಾನವಾಗಿದ್ದು, ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂತಿಮ ವಿವರ ಇನ್ನಷ್ಟೇ ಬರಬೇಕಿದೆ. 2019 ಶೇ.69.43ರಷ್ಟು ಮತದಾನಕ್ಕೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ.
ಸಂಜೆ 6 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ.77.57ರಷ್ಟು ಮತದಾನವಾಗಿದೆ. ಮಣಿಪುರದಲ್ಲಿ ಶೇ.67.46ರಷ್ಟು ಮತದಾನ ದಾಖಲಾಗಿದೆ. ತ್ರಿಪುರದಲ್ಲಿ ಶೇ.76.10, ಪುದುಚೇರಿಯಲ್ಲಿ ಶೇ.72.84, ಅಸ್ಸಾಂನಲ್ಲಿ ಶೇ.70.77, ತಮಿಳುನಾಡಿನಲ್ಲಿ ಶೇ.62.08ರಷ್ಟು ಮತದಾನ ದಾಖಲಾಗಿದೆ.