ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಹೊಸದಾಗಿ ಘೋಷಿಸಿದ ಯುನಿಫೈಡ್ ವಿಮಾ ಯೋಜನೆಯಿಂದ ವಾರ್ಷಿಕ 6250 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ.
23 ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಗಿರುವ ಯುನಿಫೈಡ್ ವಿಮಾ ಯೋಜನೆ ಏಪ್ರಿಲ್ 1, 2025ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಯುಐಎಸ್ ಅಥವಾ ಎನ್ ಪಿಎಸ್ ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಯುನಿಫೈಡ್ ವಿಮಾ ಯೋಜನೆಯ ಪ್ರಕಾರ ವಿಮಾ ಯೋಜನೆಯಲ್ಲಿ ಸರ್ಕಾರದ ಪಾಲು ಶೇ.14ರಿಂದ ಶೇ.18.5ಕ್ಕೆ ಏರಿಕೆಯಾಗಲಿದೆ. ಆದರೆ ಸರ್ಕಾರಿ ನೌಕರರ ಪಾಲು ಮೊದಲಿನಂತೆ ಶೇ.10ರಷ್ಟು ಉಳಿಯಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ.
2025, ಮಾರ್ಚ್ 31ರೊಳಗೆ ನಿವೃತ್ತಿ ಆಗಲಿರುವ ಸರ್ಕಾರಿ ನೌಕರರು ಯುನಿಫೈಡ್ ವಿಮಾ ಯೋಜನೆ ಒಪ್ಪಿಕೊಂಡರೆ ಅವರಿಗೆ ಹೆಚ್ಚುವರಿಯಾಗಿ 800 ಕೋಟಿ ರೂ. ಹೊರೆ ಸರ್ಕಾರದ ಮೇಲೆ ಬೀಳಲಿದೆ.
ಕನಿಷ್ಠ 10 ವರ್ಷದಿಂದ ಉದ್ಯೋಗದಲ್ಲಿರುವ ನೌಕರರಿಗೆ ಈ ಯೋಜನೆ ಅನ್ವಯ ಆಗಲಿದ್ದು, ಸೇವಾವಧಿಯಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಕನಿಷ್ಠ 10,000 ರೂ. ಕಡಿತವಾಗಲಿದೆ. ಅಲ್ಲದೇ ನಿವೃತ್ತಿ ಆಗುವ ಕೊನೆಯ ವರ್ಷ ಶೇ.10ರಷ್ಟು ವೇತನದಲ್ಲಿ ಕಡಿತವಾಗಲಿದೆ. ನೌಕರರಿಂದ ಕಡಿತಗೊಂಡ ಮೊತ್ತದಷ್ಟೇ ಕೇಂದ್ರ ಸರ್ಕಾರ ತನ್ನ ಪಾಲನ್ನು ನೀಡಲಿದೆ.
ಮುಂಬರುವ ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿಮಾ ಯೋಜನೆ ಘೋಷಿಸಲಾಗಿದೆ. ಅಲ್ಲದೇ ಇದರ ಬೆನ್ನಲ್ಲೇ ಮಹಾರಾಷ್ಟ್ರ ಸೇರಿದಂತೆ ಇನ್ನೆರಡು ರಾಜ್ಯಗಳ ವಿಧಾನಸಭಾ ಚುನಾವಣೆ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಹೊಸ ವಿಮಾ ಯೋಜನೆಯನ್ನು ಸರ್ಕಾರ ಘೋಷಿಸಿದೆ ಎಂದು ಹೇಳಲಾಗುತ್ತಿದೆ.