ಭಾನುವಾರ ಆಯೋಜಿಸಲಾಗಿದ್ದ ಯುಜಿಸಿ- ನೀಟ್ ಮರು ಪರೀಕ್ಷೆಯಲ್ಲಿ 1563 ವಿದ್ಯಾರ್ಥಿಗಳ ಪೈಕಿ 750 ಮಂದಿ ಗೈರು ಹಾಜರಾಗಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ಕೃಪಾಂಕ ಪಡೆದು ಪಾಸಾಗಿ ಅಕ್ರಮದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ಇದ್ದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷೆಯಲ್ಲಿ ಶೇ.48 ಮಂದಿ ಗೈರಾಗಿದ್ದರು ಎಂದು ತಿಳಿಸಿದೆ.
ಚಂಡೀಗಢ, ಗುಜರಾತ್, ಹರಿಯಾಣ, ಮೇಘಾಲಯ, ಛತ್ತೀಸಘಡ ಸೇರಿದಂತೆ 7 ಕೇಂದ್ರಗಳಲ್ಲಿ ಮರು ಪರೀಕ್ಷೆ ಏರ್ಪಡಿಸಲಾಗಿದ್ದು, 813 ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿಸಿದೆ.
ಯುಜಿಸಿ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಕೇಂದ್ರಗಳಲ್ಲಿ ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ನೀಡಿದ ಸೂಚನೆ ಮೇರೆಗೆ ಭಾನುವಾರ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ಛತ್ತೀಸಗಢದಲ್ಲಿ 602 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, 311 ಮಂದಿ ಗೈರು ಹಾಜರಾಗಿದ್ದು, 291 ಅಭ್ಯರ್ಥಿಗಳು ಹಾಜರಾಗಿದ್ದರು.
ಗುಜರಾತ್ ನಲ್ಲಿ ಒಬ್ಬ ವಿದ್ಯಾರ್ಥಿಗೆ ಮರು ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಅವರು ಹಾಜರಾಗಿದ್ದರು.
ಹರಿಯಾಣದಲ್ಲಿ 494 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, 207 ಮಂದಿ ಗೈರು ಹಾಜರಾಗಿದ್ದು, 287 ಅಭ್ಯರ್ಥಿಗಳು ಹಾಜರಾಗಿದ್ದರು.
ಮೇಘಾಲಯದಲ್ಲಿ 464 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, 230 ಮಂದಿ ಗೈರು ಹಾಜರಾಗಿದ್ದು, 234 ಅಭ್ಯರ್ಥಿಗಳು ಹಾಜರಾಗಿದ್ದರು.