ಪ್ಯಾರಾಲಿಂಪಿಕ್ಸ್ ನ 5ನೇ ದಿನ ಭಾರತದ ಪಾಲಿಗೆ ಅಮೋಘ ದಿನವಾಗಿದ್ದು, ಕ್ರೀಡಾಪಟುಗಳು ಒಂದೇ ದಿನದಲ್ಲಿ 8 ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಕ್ರೀಡಾಕೂಟದ 5ನೇ ದಿನವಾದ ಸೋಮವಾರ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿದಂತೆ ಒಂದೇ ದಿನದಲ್ಲಿ 7 ಪದಕ ಗೆದ್ದುಕೊಂಡಿತು. ಇದರೊಂದಿಗೆ ಭಾರತ 3 ಚಿನ್ನ, 5 ಬೆಳ್ಳಿ ಹಾಗೂ 7 ಕಂಚಿನ ಪದಕ ಸೇರಿದಂತೆ 15 ಪದಕಗಳೊಂದಿಗೆ 15ನೇ ಸ್ಥಾನಕ್ಕೆ ಜಿಗಿತ ಕಂಡಿತು.
ಬ್ಯಾಡ್ಮಿಂಟನ್ ನಲ್ಲಿ ನಿತೇಶ್ ಕುಮಾರ್ ಎಸ್ ಎಲ್ 3 ವಿಭಾಗದಲ್ಲಿ ಮತ್ತು ಜಾವೆಲಿನ್ ಎಫ್ 64 ವಿಭಾಗದಲ್ಲಿ ಸಮಿತ್ ಅಂಟಿಲ್ ಚಿನ್ನದ ಪದಕ ಗೆದ್ದು ಗಮನ ಸೆಳೆದರು.
ಎಲ್ ಎಸ್ ವಿಭಾಗದ ಬ್ಯಾಡ್ಮಿಂಟನ್ ನಲ್ಕಿ ಸುಹಾಸ್ ಯತಿರಾಜ್ ಮತ್ತು ಎಸ್ ಯು 5 ವಿಭಾಗದಲ್ಲಿ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕಗಳನ್ನು ಗೆದ್ದರೆ, ಮನಿಷಾ ಮುರುಗದಾಸ್ ಇದೇ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತರಾದರು.
ಎರಡೂ ಕೈಗಳಿಲ್ಲದ ಅದ್ಭುತ ಪ್ರತಿಭೆ ಶೀತಲ್ ದೇವಿ ಆರ್ಚರಿಯಲ್ಲಿ ಕಂಚಿನ ಪದಕದ ಸಾಧನೆ ಮಾಡಿದರು.
ಆರ್ಚರಿ ಮಿಶ್ರ ಕಾಂಪೌಂಡ್ ನಲ್ಲಿ ರಾಕೇಶ್ ಕುಮಾರ್ ಕಂಚು ಗೆದ್ದರೆ, ಡಿಸ್ಕಸ್ ಎಫ್ 56 ವಿಭಾಗದಲ್ಲಿ ಯೋಗೇಶ್ ಕತುನಿಯಾ ಕಂಚಿನ ಪದಕ ಗೆದ್ದು ದಿನದ ಮೊದಲ ಪದಕ ತಂದು ಶುಭಾರಂಭ ಮಾಡಿದ್ದರು.
ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ನಿತ್ಯಾಶ್ರಿ ಕಂಚಿನ ಪದಕದೊಂದಿಗೆ ದಿನದ ಪದಕದ ಬೇಟೆಗೆ ತೆರೆ ಎಳೆದರು.