8000 ಕೋಟಿ ರೂ. ಚುನಾವಣಾ ಬಾಂಡ್ ಅಕ್ರಮ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್ ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ವಿರುದ್ಧ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಕೇಂದ್ರ ಸಚಿವರು ಇರುವುದರಿಂದ ತನಿಖೆ ನಡೆಸುವುದು ಪೊಲೀಸ್ ಠಾಣೆ ವ್ಯಾಪ್ತಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಎಸ್ ಐಟಿ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಚುನಾವಣಾ ಬಾಂಡ್ ಅಕ್ರಮವಾಗಿದ್ದು, ಕೂಡಲೇ ಈ ನಿಯಮ ರದ್ದುಪಡಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಬಾಂಡ್ ಈಗ ಮುಗಿದ ಅಧ್ಯಾಯವಾಗಿದೆ. ಆದರೆ ಐಟಿ ಇಡಿ ದಾಳಿ ಬೆದರಿಯೊಡ್ಡಿ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬೆದರಿಕೆಯೊಡ್ಡಿ ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಲಾಗಿದೆ ಆರೋಪದಲ್ಲಿ ತಿಳಿಸಲಾಗಿದೆ.
ಚುನಾವಣಾ ಬಾಂಡ್ ಅಕ್ರಮದಲ್ಲಿ 5 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎ1 ಆರೋಪಿಯಾಗಿದ್ದರೆ, ಇಡಿ ಅಧಿಕಾರಿಗಳು ಎ2, ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎ3, ನಳಿನ್ ಕುಮಾರ್ ಕಟೀಲ್ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ಸೇರಿ ಹಲವರು ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ಆದರ್ಶ್ ಐಯ್ಯರ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್ ಐಆರ್ ದಾಖಲಿಸಲು ಆದೇಶಿಸಿತ್ತು. ಆದೇಶದ ಬೆನ್ನಲ್ಲೇ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 384 (ಸುಲಿಗೆ), 120b (ಅಪರಾಧಿಕ ಒಳಸಂಚು), 34 (ಸಮಾನ ಉದ್ದೇಶ) ಮೇಲೆ ಕೇಸ್ ದಾಖಲಾಗಿದೆ. ತನಿಖೆಗೆ ಎಸ್ ಐಟಿ ರಚಿಸಲು ಇಲಾಖೆ ಸಿದ್ಧತೆ ನಡೆಸಿದೆ.
ಜನಾಧಿಕಾರ ಪರಿಷತ್ ಮುಖಂಡ ದರ್ಶನ್ ಅಯ್ಯರ್, ಮಾರ್ಚ್ ನಲ್ಲಿ ನಾವು ದೂರು ನೀಡಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಚುನಾವಣಾ ಬಾಂಡ್ ಸುಲಿಗೆಯ 15 ಪ್ರಕರಣಗಳು ತಿಲಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎಂದು ಹೇಳಿದರು.