2 ಪರಮಾಣು ಸಾಮರ್ಥ್ಯದ ಸಬ್ ಮೇರಿನ್ ನಿರ್ಮಾಣ ಹಾಗೂ 31 ಪ್ರೀಡಿಯೇಟರ್ ಡ್ರೋಣ್ ಗಳ ಖರೀದಿಗೆ 80 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ರಕ್ಷಣಾ ಸಮಿತಿ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ನೌಕಾಪಡೆ ಬಲವರ್ಧನೆಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಲು ತೀರ್ಮಾನಿಸಲಾಯಿತು. ಇದರಿಂದ ಭಾರತದ ಬಳಿ ಸಬ್ ಮೇರಿನ್ ಗಳ ಸಂಖ್ಯೆ 5ಕ್ಕೆ ಏರಿಕೆಯಾಗಲಿದೆ.
ಸಮುದ್ರದಲ್ಲಿ ಭಾರತ ಗಡಿ ರಕ್ಷಣೆಗೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಪರಮಾಣು ಸಾಮರ್ಥ್ಯದ ಎರಡು ಜಲಾಂತರ್ಗಾಮಿಗಳನ್ನು ನಿರ್ಮಿಸಲು ಕೇಂದ್ರ ರಕ್ಷಣಾ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.
ವಿಶಾಖಪಟ್ಟಣದಲ್ಲಿ ಎರಡು ಸಬ್ ಮೇರಿನ್ ಗಳನ್ನು 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಸಬ್ ಮೇರಿನ್ ನಿರ್ಮಾಣದ ಗುತ್ತಿಗೆಯನ್ನು ಲಾರ್ಸೆನ್ ಮತ್ತು ಟರ್ಬೊ ಅಂತಹ ಕಂಪನಿಗಳಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.
ಭಾರತದ ಸಬ್ ಮೇರಿನ್ ನಿರ್ಮಾಣದ ಯೋಜನೆ ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದು, ಯುದ್ಧದ ಕಾರ್ಮೊಡ ಇದ್ದು, ಸಾಗರದಲ್ಲಿ ದಾಳಿ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 2 ಸಬ್ ಮೇರಿನ್ ತುರ್ತು ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದೇ ರೀತಿ 6 ಸಬ್ ಮೇರಿನ್ ಅಗತ್ಯವಿದೆ ಎಂದು ಹೇಳಲಾಗಿದೆ.