8 ವರ್ಷದ ಬಾಲಕಿಯ ಹೊಟ್ಟೆಯಿಂದ ಕ್ರಿಕೆಟ್ ಚೆಂಡಿನ ಗಾತ್ರದ ಕೂದಲನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೂದಲು ತಿನ್ನುವ ರಾಪುಂಜೆಲ್ ಸಿಂಡ್ರೋಮ್ ಅಭ್ಯಾಸಕ್ಕೆ ಒಳಗಾಗಿದ್ದ ಬಾಲಕಿ ಟ್ರೈಕೋಫೇಜಿಯಾ ಎಂಬ ವಿಚಿತ್ರ ಸಮಸ್ಯೆಗೆ ಒಳಗಾಗಿದ್ದಳು.
ಕಳೆದ ಎರಡು ವರ್ಷಗಳಿಂದ ಹಸಿವು ಆಗದೇ ಇರುವುದು ಮತ್ತು ಆಗಾಗ್ಗೆ ವಾಂತಿ ಮಾಡುತ್ತಿದ್ದರಿಂದ ಕುಟುಂಬ ಆತಂಕಕ್ಕೆ ಒಳಗಾಗಿತ್ತು.
ಮಗಳನ್ನು ಮಕ್ಕಳ ವೈದ್ಯರು, ಸಾಮಾನ್ಯ ವೈದ್ಯರು ಮತ್ತು ಇಎನ್‌ಟಿ ತಜ್ಞರು ಸೇರಿದಂತೆ ಅನೇಕ ವೈದ್ಯರ ಬಳಿಗೆ ಕರೆದೊಯ್ದರೂ ಸಮಸ್ಯೆ ಗುರುತಿಸಲು ಆಗದೇ ಜಠರ ಉರಿತ ಸಾಮಾನ್ಯ ಕಾಯಿಲೆ ಎಂದು ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು.
ಬೆಂಗಳೂರಿನ ಆಸ್ಟರ್ಸ್ ಚಿಲ್ಡ್ರನ್ ಮತ್ತು ವುಮೆನ್ ಹಾಸ್ಪಿಟಲ್‌ನ ವೈದ್ಯರು ಆಕೆಗೆ ಟ್ರೈಕೋಬೆಜೋರ್ ಸಮಸ್ಯೆ ಇದೆ ಎಂದು ಪತ್ತೆ ಹಚ್ಚಿದರು. ಟ್ರೈಕೋಬೆಜೋರ್ ಎಂದರೆ ಜಠರ ಕರುಳಿನ ಪ್ರದೇಶದಲ್ಲಿ ಸಂಗ್ರಹವಾದ ಎಲ್ಲಾ ಕೂದಲಿನ ದ್ರವ್ಯರಾಶಿ ಆಗಿದೆ.
ಟ್ರೈಕೋಬೆಜೋರ್ ಸಮಸ್ಯೆ ದೊಡ್ಡವರಲ್ಲಿ ಕಂಡು ಬರುತ್ತದೆ. ಆದರೆ 8 ವರ್ಷದ ಬಾಲಕಿಯಲ್ಲಿ ಈ ಸಮಸ್ಯೆ ಕಂಡು ಬಂದಿದ್ದರಿಂದ ವೈದ್ಯರಿಗೆ ಚಿಕಿತ್ಸೆ ನೀಡುವುದು ಸವಾಲಿನ ವಿಷಯವಾಗಿತ್ತು.
ಲ್ಯಾಪರೊಟಮಿ ಎಂದೂ ಕರೆಯಲ್ಪಡುವ ತೆರೆದ ಹೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ಅದಿತಿಗೆ ಮಾಡಬೇಕಾಗಿತ್ತು. ಏಕೆಂದರೆ ಕೂದಲ ಉಂಡೆ ತುಂಬಾ ದೊಡ್ಡದಾಗಿತ್ತು ಮತ್ತು ಜಠರ ಭಾಗದಲ್ಲಿ ಅಂಟಿಕೊಂಡಿತ್ತು. ಇದರಿಂದ ಎಂಡೋಸ್ಕೋಪಿ ಮಾಡುವುದು ಕೂಡ ಕಠಿಣವಾಗಿತ್ತು.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಂತರ ಯಶಸ್ವಿಯಾಗಿ ಕೂದಲ ಉಂಡೆ ಹೊರತೆಗೆಯಲಾಯಿತು. ಈ ವಿಧಾನವು ಫಲಪ್ರದವಾಗಿದ್ದು, ಬಾಲಕಿ ಆರೋಗ್ಯವಾಗಿದ್ದಾಳೆ ಎಂದು ಹಿರಿಯ ವೈದ್ಯ ಪೀಡಿಯಾಟ್ರಿಕ್ ಸರ್ಜರಿ ”ಡಾ. ಮಂಜಿರಿ ಸೋಮಶೇಖರ್ ವಿವರಿಸಿದರು.
ಈ ಸಮಸ್ಯೆಗೆ ಕೂಡಲೇ ಚಿಕಿತ್ಸೆ ನೀಡದೇ ಇದ್ದರೆ ತೀವ್ರವಾದ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಹೊಟ್ಟೆಯಿಂದ ಗಮನಾರ್ಹ ರಕ್ತಸ್ರಾವ ಉಂಟಾಗಿ ಜೀವಕ್ಕೆ ತೊಂದರೆ ಆಗಬಹುದು. ಶಸ್ತ್ರಚಿಕಿತ್ಸೆಯ ನಂತರ ಆಕೆಯನ್ನು ವಿಶೇಷ ಆಹಾರ ಪದ್ಧತಿ ನೀಡುವ ಮೂಲಕ ಬಾಲಕಿಯ ಆರೋಗ್ಯಕ್ಕೆ ಸಲಹೆ ನೀಡಲಾಯಿತು.