ಕ್ರಿಮಿನಲ್ ಗಳು ರಾಜಾರೋಷವಾಗಿ, ಸ್ವತಂತ್ರವಾಗಿ ತಿರುಗಾಡುತ್ತಿದ್ದರೆ, ಸಂತ್ರಸ್ತರು ಭಯದ ಜೀವನ ನಡೆಸುತ್ತಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮರ್ಮು ಕಿಡಿಕಾರಿದ್ದಾರೆ.
ಭಾನುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದವರಿಗೆ ಸಮಾಜದಲ್ಲಿ ರಕ್ಷಣೆ ದೊರೆಯುತ್ತಿದೆ ಎಂದು ಹೇಳಿದ್ದಾರೆ.
ಕೋಲ್ಕತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಮಲಯಾಳಂ ಚಲನಚಿತ್ರ ರಂಗದಲ್ಲಿ ವಿವಾದ ಸೃಷ್ಟಿಸಿರುವ ಮೀಟೂ ಪ್ರಕರಣಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮು, ಇತ್ತೀಚಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ ದೇಶದ ಹೆಣ್ಣುಮಕ್ಕಳನ್ನು ದೇಶ ಹೇಗೆ ನೋಡುತ್ತಿದೆ ಎಂಬುದು ಇದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಕ್ರಿಮಿನಲ್ ಪ್ರಕರಣಗಳನ್ನು ಎಸಗಿದವರು ಕೂಡ ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಸಮಾಜ ನೋಡಿಕೊಂಡು ಸಮ್ಮನಿದೆ. ಹಲವು ಅಪರಾಧಗಳನ್ನು ಮಾಡಿದವರು ಸ್ವತಂತ್ರವಾಗಿ ಸಾರ್ವಜನಿಕ ಜೀವನದಲ್ಲಿ ಇದ್ದರೆ, ದೌರ್ಜನ್ಯಕ್ಕೆ ಒಳಗಾದವರು ಭಯದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಸಂತ್ರಸ್ತ ಮಹಿಳೆಯರ ಸ್ಥಿತಿ ಇದಕ್ಕಿಂತಲೂ ಶೋಚನೀಯವಾಗಿದೆ. ಏಕೆಂದರೆ ಸಮಾಜದಲ್ಲಿ ಅವರಿಗೆ ಯಾವುದೇ ಬೆಂಬಲ ಸಿಗದೇ ಇರುವುದರಿಂದ ಎಂದು ದ್ರೌಪದಿ ಮರ್ಮು ಅಸಮಾಧಾನ ವ್ಯಕ್ತಪಡಿಸಿದ್ದಾರೆ.