ಭಾರತದ ಪ್ರೀತ್ ಪಾಲ್ ವನಿತೆಯರ 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ 2 ಪದಕ ಗೆದ್ದು ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಸ್ಪರ್ಧಿ ಎಂಬ ಇತಿಹಾಸ ಬರೆದಿದ್ದಾರೆ.
ಭಾನುವಾರ ನಡೆದ ಟಿ-34 ವಿಭಾಗದ ಫೈನಲ್ ನಲ್ಲಿ ಪ್ರೀತಿ ಪಾಲ್ 30.01 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.
ಇದಕ್ಕೂ ಮುನ್ನ 100 ಮೀ. ಓಟದಲ್ಲೂ ಕಂಚಿನ ಪದಕ ಗೆದ್ದಿದ್ದ ಪ್ರೀತಿ ಪಾಲ್ ಓಟದ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತದ ಸ್ಪರ್ಧಿ ಎಂಬ ದಾಖಲೆ ಬರೆದಿದ್ದರು. ಇದೀಗ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಮತ್ತೊಂದು ದಾಖಲೆ ಬರೆದಿದ್ದಾರೆ.
ಚೀನಾದ ಕ್ಸಿಯಾ ಜೊಹು 28.15 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದರೆ, ಚೀನಾದ ಮತ್ತೊಬ್ಬ ಸ್ಪರ್ಧಿ ಗುವಾ ಕ್ವಿನ್ ಕ್ವಿನ್ 29.09 ಸೆಕೆಂಡ್ ನೊಂದಿಗೆ ಬೆಳ್ಳಿ ಪದಕ ಗೆದ್ದರು. ವಿಶೇಷ ಅಂದರೆ ಈ ಮೂವರು 100 ಮೀ. ಓಟದಲ್ಲೂ ಇದೇ ಸ್ಥಾನ ಪಡೆದಿದ್ದರು.
23 ವರ್ಷದ ಪ್ರೀತಿ ಪಾಲ್ ಜೀವನಶ್ರೇಷ್ಠ ಸಾಧನೆಯೊಂದಿಗೆ ಕಂಚಿನ ಪದಕ ಗೆದ್ದು ದಾಖಲೆ ಬರೆದರು. ಈ ಮೂಲಕ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ 7ಕ್ಕೇರಿತು.