ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಏಕಾಏಕಿ ಬುಲ್ಡೋಜರ್ ಮೂಲಕ ಮನೆ ನೆಲಸಮ ಹೇಗೆ ಮಾಡುತ್ತೀರಿ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆರೋಪಿಗಳ ಮನೆಯನ್ನು ಏಕಾಏಕಿ ಧ್ವಂಸಗೊಳಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ಬುಲ್ಡೋಜರ್ ಸಂಸ್ಕೃತಿ ತಡೆಗೆ ಅಥವಾ ಜಾರಿಗೊಳಿಸುವ ಕುರಿತು ದೇಶಾದ್ಯಂತ ಸೂಕ್ತ ಮಾರ್ಗಸೂಚಿ ಅಗತ್ಯವಿದೆ ಎಂದು ಸೂಚಿಸಿದೆ.
ಹಿರಿಯ ವಕೀಲ ದುಷ್ಯಂತ್ ದೇವ್ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ದೇಶಾದ್ಯಂತ ವಿಸ್ತರಿಸುವ ಮುನ್ನ ಸೂಕ್ತ ಮಾರ್ಗಸೂಚಿ ಹೊರಡಿಸಬೇಕು ಎಂದು ಮನವಿ ಮಾಡಿದರು.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥ್ ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದರು.
ಕೇಂದ್ರ ಸರ್ಕಾರದ ಪರ ವರದಿ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿ ಅಥವಾ ಅಪರಾಧಿ ಎಂಬ ಕಾರಣಕ್ಕೆ ಸ್ಥಿರಾಸ್ತಿ ನೆಲಸಮ ಮಾಡುವಂತಿಲ್ಲ. ಆದರೆ ಅಕ್ರಮವಾಗಿ ನಿರ್ಮಿಸಿದ ಮನೆ ಅಥವಾ ಕಟ್ಟಡವನ್ನು ನೆಲಸಮಗೊಳಿಸಬಹುದು ಎಂದು ವಾದಿಸಿದರು.
ಎರಡೂ ಕಡೆ ವಾದ ಆಲಿಸಿದ ಸುಪ್ರೀಂಕೋರ್ಟ್ ಬುಲ್ಡೋಜರ್ ನ್ಯಾಯ ಪಾಲನೆ ಕುರಿತು ದೇಶಾದ್ಯಂತ ಏಕರೂಪದ ನಿಯಮ ಜಾರಿಗೊಳಿಸಬೇಕಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ನಿಯಮ ಅನುಸರಿಸುವುದು ಸರಿಯಲ್ಲ ಎಂದು ಹೇಳಿತು.