ತನ್ನನ್ನು ವಿವಸ್ತ್ರಗೊಳಿಸಿ ಡ್ಯಾನ್ಸ್ ಮಾಡಿಸಿದ್ದೂ ಅಲ್ಲದೇ 5 ಮಂದಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಜುಲೈ 17ರಂದು ಕನಾಡಿಯಾ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಇಂದೋರ್ ಹೈಕೋರ್ಟ್ ಮಹಿಳೆಯ ದೂರು ಸ್ವೀಕರಿಸಿ 90 ದಿನದೊಳಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ವಿಶೇಷ ಅಂದರೆ ಹೈಕೋರ್ಟ್ ಆಗಸ್ಟ್ 14ರಂದು ಆದೇಶ ನೀಡಿದ್ದರೂ 19 ದಿನಗಳ ನಂತರ ಕನಾಡಿಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಜುಲೈ 11ರಂದು ನನ್ನನ್ನು ಬಲವಂತವಾಗಿ ಗೋಡಾನ್ ನಲ್ಲಿ ಕರೆದೊಯ್ದ ವ್ಯಕ್ತಿ ಅತ್ಯಾಚಾರ ಎಸಗಿದ್ದೂ ಅಲ್ಲದೇ ವೀಡಿಯೊಗಳನ್ನು ನೋಡಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೇ ನನ್ನ ಬಟ್ಟೆ ಬಿಚ್ಚಿಸಿ ಬೆಲ್ಟ್ ನಿಂದ ಹೊಡೆದು ಬೆತ್ತಲೆಯಾಗಿ ಸುಮಾರು ಒಂದೂವರೆ ಗಂಟೆ ಬೆತ್ತಲೆ ಡ್ಯಾನ್ಸ್ ಮಾಡಿಸಿದ್ದಾರೆ. ನಂತರ 5 ಮಂದಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾಳೆ.
ಮಹಿಳೆ ನೀಡಿದ ದೂರಿನಲ್ಲಿ ಆರೋಪಿಗಳ ಪೈಕಿ ಒಬ್ಬ ಬಿಜೆಪಿ ಕಾರ್ಯಕರ್ತ ಆಗಿರುವುದರಿಂದ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿ ಹಾಕಿದೆ.