ರೈಲು ಅಪಘಾತದ ವೇಳೆ ಸ್ನೇಹಿತನನ್ನು ರಕ್ಷಿಸುವ ಭರದಲ್ಲಿ ಕೈ ಕಳೆದುಕೊಂಡಿದ್ದ ಅಜಿತ್ ಸಿಂಗ್ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಗುರುವಾರ ನಡೆದ ಎಪ್ 46 ವಿಭಾಗದ ಜಾವೆಲಿನ್ ಸ್ಪರ್ಧೆಯಲ್ಲಿ 65.62ಮೀ. ದೂರ ದಾಖಲಿಸಿ ಬೆಳ್ಳಿ ಪದಕ ಗೆದ್ದುಕೊಂಡರು.
23 ವರ್ಷದ ಅಜಿತ್ ಸಿಂಗ್ ಯಾದವ್, 7 ವರ್ಷಗಳ ಹಿಂದೆ ರೈಲು ಅಪಘಾತದಲ್ಲಿ ಸ್ನೇಹಿತನ ರಕ್ಷಿಸುವಾಗ ಕೈ ಕಳೆದುಕೊಂಡಿದ್ದರು.
2017ರಲ್ಲಿ ಗ್ವಾಲಿಯರ್ ನಲ್ಲಿ ರಿಸರ್ಚ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್ ಸಿಂಗ್, ಸಹಾಯಕನಾಗಿದ್ದ ಅಂಶುಮಾನ್ ಜೊತೆ ಜಬಲಾಪುರ್ ನಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ರೈಲಿನಲ್ಲಿ ಮರಳುತ್ತಿದ್ದರು.
ರೈಲ್ವೆ ನಿಲ್ದಾಣದಲ್ಲಿ ನೀರು ಕುಡಿಯಲು ಇಬ್ಬರು ಇಳಿದಿದ್ದರು. ನಂತರ ವಾಪಸ್ ಬರುವಾಗ ರೈಲು ಚಲಿಸಲು ಆರಂಭಿಸಿತ್ತು. ಅಜಿತ್ ರೈಲು ಹತ್ತಿದರೆ ಅಂಶುಮಾನ್ ರೈಲು ಹತ್ತುವಾಗ ಮೆಟ್ಟಿಲ ಬಳಿ ಜಾರಿ ಬಿದ್ದರು.
ಕೂಡಲೇ ಅಂಶುಮಾನ ರಕ್ಷಿಸಲು ಮುಂದಾದ ಅಜಿತ್ ತಾನು ಕೂಡ ಆಯತಪ್ಪಿ ಕೆಳಗೆ ಬಿದ್ದರು. ಅಂಶುಮಾನ್ ಪಾರಾದರೆ, ಅಜಿತ್ ಕೈ ರೈಲು ಚಕ್ರಕ್ಕೆ ಸಿಲುಕಿ ತುಂಡಾಯಿತು.
ಎರಡು ಮೂರು ಆಸ್ಪತ್ರೆ ಅಲೆದಾಡಿದ ನಂತರ ಅಜಿತ್ವಗೆ ಚಿಕಿತ್ಸೆ ನೀಡಲಾಯಿತು. ಒಂದು ಕೈ ಕಳೆದುಕೊಂಡ ನಂತರ ಕ್ರೀಡೆಯಲ್ಲಿ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡ ಅಜಿತ್ ಇಂದು ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.