ದೇಶಗಳ ಗಡಿ ದಾಟಿ ನಡೆಯುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಕೇಂದ್ರ ಗೃಹ ಸಚಿವಾಲಯ 500 ಸೈಬರ್ ಕಮಾಂಡೋಗಳಿಗೆ ತರಬೇತಿ, ಡೇಟಾ ನೋಂದಣಿ ಸೇರಿದಂತೆ ಹಲವು ಕ್ರಮಗಳನ್ನು ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸೈಬರ್ ಅಪರಾಧ ನಿಯಂತ್ರಿಸಲು 5,000 ‘ಸೈಬರ್ ಕಮಾಂಡೋ’ಗಳಿಗೆ ತರಬೇತಿ, ವೆಬ್ ಆಧಾರಿತ ಡೇಟಾ ನೋಂದಣಿ ಮತ್ತು ಸೈಬರ್ ಅಪರಾಧ ಮಾಹಿತಿಯನ್ನು ಹಂಚಿಕೊಳ್ಳಲು ಪೋರ್ಟಲ್ ಮತ್ತು ರಾಷ್ಟ್ರೀಯ ನೋಂದಣಿ ಸೇರಿದಂತೆ ಹಲವಾರು ಹೊಸ ಉಪಕ್ರಮಗಳನ್ನು ಘೋಷಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (ಐ4ಸಿ) ಮೊದಲ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ತಂತ್ರಜ್ಞಾನ ಅಭವೃದ್ಧಿ ಹಿನ್ನೆಲೆಯಲ್ಲಿ ಸೈಬರ್ ಅಪರಾಧ ತಡೆಯುವುದು ಅತೀ ಮುಖ್ಯವಾಗಿದೆ. ಸೈಬರ್ ಭದ್ರತೆ ಇಲ್ಲದೇ ದೇಶದ ಭದ್ರತೆ ಅಸಾಧ್ಯ ಎಂದು ಬಣ್ಣಿಸಿದರು.
ಪ್ರಮುಖ ಬ್ಯಾಂಕ್, ಹಣಕಾಸು ಮಧ್ಯವರ್ತಿ, ಪಾವತಿ ಸಂಗ್ರಾಹಕರು, ಟೆಲಿಕಾಂ ಪ್ರತಿನಿಧಿಗಳೊಂದಿಗೆ ಸೈಬರ್ ವಂಚನೆ ತಗ್ಗಿಸುವ ಕೇಂದ್ರ (ಸಿಎಫ್‌ಎಂಸಿ) ಸ್ಥಾಪಿಸಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸೇವಾ ಪೂರೈಕೆದಾರರು, ಐಟಿ ಮಧ್ಯವರ್ತಿಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ಸಂಸ್ಥೆಯ ಭಾಗವಾಗಿರುತ್ತಾರೆ ಎಂದು ಅವರು ವಿವರಿಸಿದರು.
ಆನ್‌ಲೈನ್ ಹಣಕಾಸು ಅಪರಾಧಗಳನ್ನು ನಿಭಾಯಿಸಲು ತಕ್ಷಣದ ಕ್ರಮ ಮತ್ತು ತಡೆರಹಿತ ಸಹಕಾರಕ್ಕಾಗಿ ಈ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಸಿಎಫ್ ಎಂಸಿ ಕಾನೂನು ಜಾರಿಯಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆ ಮಾದರಿಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.