ರಾಜ್ಯದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರಕಾರದ ಸಹಕಾರ ಕೋರಿ ಮತ್ತು ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಮೂವರು ಕೇಂದ್ರ ಸಚಿವರನ್ನು ಭೇಟಿ ಮಾಡಿ ನೆರವು ಕೋರಿದರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಎಂಬಿ ಪಾಟೀಲ್ ರಾಜ್ಯದ ಅಭಿವೃದ್ಧಿ ಕುರಿತು ಸಹಕಾರ ಕೋರಿದರು.
2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನ ಎಡೆಬಿಡದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.
ರಾಜ್ಯದವರೇ ಆದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಂಡ ಪಾಟೀಲ ಅವರು, ಮೇಲಿನ ಸಂಗತಿಗಳ ಜತೆಗೆ ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು.
ಅಲ್ಲದೆ ಅವರು, ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್ ಗಳ ಸ್ಥಾಪನೆಯ ಜರೂರು, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆ, ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆ ಮಾತುಕತೆ ನಡೆಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಚಿವರು, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್ ಟಿ ತೆರಿಗೆಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರೀ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಸಿಂಗಪುರ್ ಹೈಕಮೀಷನರ್ ಭೇಟಿ
ಇದಕ್ಕೂ ಮುನ್ನ ಎಂ ಬಿ ಪಾಟೀಲ, ಸಿಂಗಪುರ್ ಹೈಕಮಿಷನರ್ ಸೈಮನ್ ವಾಂಗ್ ಅವರನ್ನು ಭೇಟಿಯಾಗಿ, ಫೆಬ್ರವರಿಯಲ್ಲಿ ನಡೆಯಲಿರುವ ಹಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಅವರು, ಇತ್ತೀಚೆಗೆ ಭಾರತ ಮತ್ತು ಸಿಂಗಪುರ್ ಸೆಮಿಕಂಡಕ್ಟರ್, ಡಿಜಿಟಲ್ ಸಹಕಾರ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಮಾಡಿಕೊಂಡಿರುವ ಒಡಂಬಡಿಕೆ ಕುರಿತು ಚರ್ಚಿಸಿದರು.
ಇದಕ್ಕೆ ಸ್ಪಂದಿಸಿದ ಹೈಕಮಿಷನರ್, ನೆಟ್-ಜೀರೋ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಲು ತಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಜತೆಗೆ ಡೇಟಾ ಕೇಂದ್ರಗಳು, ಎಂಆರ್ ಓ, ವೈದ್ಯಕೀಯ ಉಪಕರಣಗಳು ಮತ್ತು ಔಷಧ ಕಂಪನಿಗಳಲ್ಲಿ ಹೂಡಿಕೆ ಮಾಡಲು ತಮ್ಮ ದೇಶದ ಕಂಪನಿಗಳಿರುವ ಒಲವನ್ನು ಹಂಚಿಕೊಂಡರು.