ಪಿತೃಪಕ್ಷ ಅಂದರೆ ಹಿರಿಯರಿಗೆ ಇಷ್ಟವಾದ ಭಕ್ಷ್ಯ ಭೋಜನ ಇರಿಸಿ ಪೂಜೆ ಮಾಡುವುದು. ಗಾಂಧೀಜಿ ಅಂದರೆ ಅಹಿಂಸೆ. ಆದ್ದರಿಂದ ಗಾಂಧಿ ಜಯಂತಿಯಂದು ಪ್ರಾಣಿ ಬಲಿ, ಮಾಂಸ ಮಾರಾಟ ನಿಷಿದ್ಧ.
ಆದರೆ ಇದೇ ಮೊದಲ ಬಾರಿಗೆ ಪಿತೃಪಕ್ಷ ಮತ್ತು ಗಾಂಧಿ ಜಯಂತಿ ಎರಡೂ ಒಂದೇ ದಿನ ಬಂದಿದೆ. ಇದರಿಂದ ಪಿತೃಪಕ್ಷ ದಿನ ಮಾಂಸಹಾರ ಮಾಡಿ ಹಿರಿಯರಿಗೆ ಅರ್ಪಿಸುವ ಸಂಪ್ರದಾಯ ಆಚರಿಸುತ್ತಾ ಬಂದಿರುವವರಿಗೆ ಈಗ ಸಂಕಷ್ಟ ಎದುರಾಗಿದೆ.
ಮಾಂಸಹಾರ ಭೋಜನ ಸಿದ್ಧಪಡಿಸಿ ಪಿತೃಪಕ್ಷದ ದಿನ ಹಿರಿಯರ ಪೂಜೆ ಸಲ್ಲಿಸುವವರಿಗೆ ಕಂಟಕ ಯಾಕೆ ಅಂದರೆ ಗಾಂಧಿ ಜಯಂತಿಯಂದು ಸರ್ಕಾರಗಳು ಮಾಂಸ ಮಾರಾಟ, ಪ್ರಾಣಿ ಮತ್ತು ಬಾರ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ನಿಷೇಧಿಸುತ್ತದೆ.
ಇದರಿಂದ ಪಿತೃಪಕ್ಷದ ಆಚರಣೆಗೆ ಬೃಹತ್ ವಿಘ್ನ ಎದುರಾಗಿದ್ದು, ಹಿಂದೂಗಳಿಗೆ ಪಿತೃಪಕ್ಷ ಅತ್ಯಂತ ಮಹತ್ವದಚಹಬ್ಬವಾಗಿದ್ದು, ಇತಿಹಾಸದಲ್ಲಿ ಹಿಂದೆಂದೂ ಇಂತಹ ಸಂಕಷ್ಟ ಪಿತೃಪಕ್ಷಕ್ಕೆ ಎದುರಾಗಿರಲಿಲ್ಲ.
ಪಿತೃಪಕ್ಷ,ಕುಟುಂಬದಲ್ಲಿ ಮೃತಪಟ್ಟ ಹಿರಿಯರಿಗೆ ಗೌರವ ಸೂಚಿಸುವ ಹಬ್ಬ. ತರೇವಾರಿ ಖಾದ್ಯಗಳನ್ನು ಎಡೆ ಇಟ್ಟು ಗೌರವ ಸೂಚಿಸುವ ಹಬ್ಬ ಕೂಡಾ ಆಗಿದೆ.
ಮಾಂಸಹಾರಿಗಳಿಗೆ ಪಿತೃಪಕ್ಷ ಅಂದ್ರೆ ಸಂಭ್ರಮವೊ ಸಂಭ್ರಮ. ಬಾಡೂಟದ ಹೊರತಾಗಿ ಪಿತೃಪಕ್ಷ ಕಲ್ಪಿಸಿಕೊಳ್ಳೋದು ಕಷ್ಟ. ಹಿರಿಯರಿಗೆ ಎಡೆ ಸಮರ್ಪಿಸಿ ಕುಟುಂಬ ಸಮೇತ ಬಾಡೂಟ ಸೇವಿಸಿ ಸಂಭ್ರಮಿಸಲಾಗುತ್ತದೆ.
ಈ ಬಾರಿಯ ಪಿತೃಪಕ್ಷಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡ ಮಾಂಸಹಾರಿಗಳಿಗೆ ನಿರಾಸೆ ಆಗುವ ಸಾಧ್ಯತೆ ಇದ್ದು, ಪಿತೃಪಕ್ಷವನ್ನು ಬಾಡೂಟವಿಲ್ಲದೆ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಡಿಲ್ಲದೆ ಪಿತೃಪಕ್ಷ ಮಾಡೊಕ್ಕಾಗುತ್ತಾ ಎಂಬದೇ ಪ್ರಶ್ನೆ ಜನರನ್ನು ಕಾಡತೊಡಗಿದೆ. ಕ್ಯಾಲೆಂಡರ್ ಪ್ರಕಾರ ಈ ಬಾರಿಯ ಅಕ್ಟೋಬರ್ 2ರಂದು ಗಾಂಧೀ ಜಯಂತಿಯಂದೆ ಮಹಾಲಯ ಅಮವಾಸ್ಯೆ ಬಂದಿದೆ. ಗಾಂಧೀ ಜಯಂತಿ ಅಹಿಂಸಾ ದಿನವಾಗಿಯೂ ಆಚರಣೆ ಮಾಡಲಾಗುತ್ತಾ ಬರಲಾಗಿದೆ.
ಗಾಂಧೀ ಜಯಂತಿಯಂದು ಮಾಂಸ ಮಾರಾಟ ನಿಷೇಧಿಸಲಾಗಿದೆ. ಸರ್ಕಾರದಿಂದಲೇ ಚಾಚೂತಪ್ಪದೆ ಈ ನಿಯಮ ಪಾಲಿಸಲಾಗುತ್ತಿದೆ.
ಗಾಂಧಿ ಜಯಂತಿಯಂದು ಮಾಂಸ ಮಾರಾಟ ನಿಷೇಧ ಜಾರಿ ಮಾಡಿ ಸರ್ಕಾರವೇ ಆದೇಶ ಹೊರಡಿಸುತ್ತಾ ಬಂದಿದೆ. ಇದರಿಂದ ಏನು ಮಾಡ್ಬೇಕೆಂದು ಗೊತ್ತಾಗದೆ ಜನ ಚಿಂತಾಕ್ರಾಂತರಾಗಿದ್ದಾರೆ.
ಮಾಂಸ ನೈವೇಧ್ಯಿಸದಿದ್ದರೆ ಸಂಪ್ರದಾಯಕ್ಕೆ ಚ್ಯುತಿ ಆಗಲಿದೆ. ಮಾಂಸ ಸೇವಿಸಿದ್ರೆ ಮಹಾತ್ಮನ ಆಶಯಗಳಿಗೆ ಧಕ್ಕೆ ಆಗುತ್ತದೆ. ಅಲ್ಲದೇ ಸರ್ಕಾರದ ನಿಯಮ ಉಲ್ಲಂಘಿಸಿದ ಆರೋಪಕ್ಕೂ ಗುರಿಯಾಗಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಗಾಂಧಿ ಜಯಂತಿಯಂದು ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಕೋರಿದ್ದಾರೆ. ಕಠಿಣ ನಿಯಮ ಸಡಿಲಿಸಿ ಧಾರ್ಮಿಕ ಶೃದ್ಧೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇದೊಂದು ವರ್ಷ ಈ ನಿಯಮ ಪಾಲಿಸುವಂತೆ ಮನವಿ ಮಾಡಲಾಗಿದೆ. ವಿಶೇಷ ದಿನವನ್ನಾಗಿ ಘೋಷಿಸುವಂತೆ ಸಿಎಂಗೆ ವಿನಂತಿ ಮಾಡಿದ್ದಾರೆ. ಮಾಂಸ ಮಾರಾಟ ಆದೇಶ ಹಿಂಪಡೆದು ರಾಜ್ಯಾದ್ಯಂತ ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ವಿನಂತಿಸಿದ್ದಾರೆ. ಸರ್ಕಾರ ಮನವಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬ ಕುತೂಹಲ ಮೂಡಿದೆ.